ಚಿಕ್ಕಮಗಳೂರು: ಮಹಿಳಾ ಉದ್ಯೋಗಿಗಳು ಸ್ವಾವಲಂಬನೆ ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಅವರು ನಡೆಸುವ ಗುಡಿಕೈಗಾರಿಕೆಗೆ ಉತ್ತೇಜನ ನೀಡಲು ನಗರಸಭೆ ಮತ್ತು ಲೀಡ್ ಬ್ಯಾಂಕ್ ಸಹಕಾರದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲಮೇಳ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ, ಅಮೃತ ಮಹೋತ್ಸವದ ಅಂಗವಾಗಿ ನಗರಸಭೆ ಹಾಗೂ ಲೀಡ್ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಸಹಾಯ ಸಂಘಗಳಿಗೆ ಸಾಲಮೇಳ ಹಾಗೂ ಸ್ವಚ್ಚತೆ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಲು ಸರ್ಕಾರವು ಹಲವು ಯೋಜನೆಗಳ ಮೂಲಕ ಸಾಲ ಸೌಲಭ್ಯವನ್ನು ನೀಡುತ್ತಿದೆ. ಮಹಿಳೆಯರು ಮಾಡುವ ಉದ್ಯೋಗವನ್ನು ಆಧರಿಸಿ ೧೦ ಸಾವಿರದಿಂದ ೫ ಲಕ್ಷದವರೆಗೂ ಸಾಲ ಸೌಲಭ್ಯ ನೀಡುವ ಗುರಿಯಿದೆ. ಸಾಲದ ಮೇಲಿನ ಬಡ್ಡಿಗೆ ಸರ್ಕಾರವೇ ಸಬ್ಸಿಡಿ ನೀಡಲಿದೆ ಬಡವರು ಸ್ವಯಂ ಉದ್ಯೋಗ ಕೈಗೊಂಡು ಜೀವನ ನಿರ್ವಹಣೆ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಳೆದ ವರ್ಷ ೬೮೦ ಬೀದಿ ಬದಿ ವ್ಯಾಪಾರಿಗಳಿಗೆ ತಲಾ ೧೦ ಸಾವಿರ ಸಾಲ ನೀಡಿದ್ದೆವು, ಅದಕ್ಕೂ ಬಡ್ಡಿ ಕಡಿಮೆಯಿದೆ. ಅನೇಕ ಮಂದಿ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ್ದಾರೆ. ಈ ವರ್ಷ ಅಂತವರನ್ನು ಗುರುತಿಸಿ ೩೦೦ ಮಂದಿಗೆ ತಲಾ ೨೦ ಸಾವಿರ ಸಾಲ ನೀಡಲಾಗುತ್ತಿದೆ. ಮುಂದಿನ ವರ್ಷಕ್ಕೆ ೫೦ ಸಾವಿರಕ್ಕೆ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.
ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನಗರಸಭೆ ಆಟೋ ಟಿಪ್ಪರ್ಗಳಿಗೆ ನೀಡಬೇಕು, ಉಲ್ಲಂಘನೆ ಮಾಡಿದ್ದಲ್ಲಿ ನಗರಸಭೆಯಿಂದ ನೀಡಲಾಗುವ ವಿದ್ಯುತ್, ನೀರು, ಒಳಗೊಂಡಂತೆ ಮೂಲಭೂತ ಸವಲತ್ತುಗಳನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.\
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಮಾತನಾಡಿ ಸ್ತ್ರೀ ಶಕ್ತಿ ಸಂಘದವರಿಗೆ ಸಾಲ ಸೌಲಭ್ಯ ಅಗತ್ಯವಿದ್ದಾಗ ಬ್ಯಾಂಕ್ಗಳು ಸ್ಪಂದಿಸದಿದ್ದರೆ ಲೀಡ್ ಬ್ಯಾಂಕ್ನಲ್ಲಿ ಬಂದಲ್ಲಿ ಸ್ಪಂದಿಸಲಾಗುವುದು, ಬ್ಯಾಂಕ್ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸಾಲ ಒದಗಿಸಲು ಕ್ರಮವಹಿಸಲಾಗುವುದು ಎಂದರು.
ಅರ್ಜಿಗಳು ಸಲ್ಲಿಕೆಯಾದಾಗ ಮಾಹಿತಿ ಪಡೆದು ೨೫ ರಿಂದ ೩೦ ಸಂಘಗಳಿಗೆ ಹಾಗೂ ೫೦ ಮಂದಿ ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ ವರ್ಷ ತುಂಬಿದ್ದರೂ ಸ್ವಚ್ಚತೆಯ ಬಗ್ಗೆ ಮಾತನಾಡುತ್ತಿದ್ದೇವೆ, ನಮ್ಮೆಲ್ಲರ ಮನದಲ್ಲಿ ನಾಗರೀಕರಿಗೆ ಸ್ವಚ್ಚತೆಯ ಕುರಿತು ಪ್ರಜ್ಞೆ ಬರಬೇಕಿದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಗರ ಸ್ತ್ರೀಶಕ್ತಿ ಸಂಘದ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಕೌಶಲ್ಯಾಭಿವೃದ್ಧಿ ಮಿಷನ್ ವ್ಯವಸ್ಥಾಪಕ ಶಿವಲಿಂಗಯ್ಯ, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಚಂದ್ರಶೇಖರ್ ಮತ್ತಿತರರು ಇದ್ದರು.

























Discussion about this post