ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ವೈವಿದ್ಯಮಯ ಕಾಯಿಲೆಗಳು ಜನರನ್ನು ಬಾಧಿಸುತ್ತಿದ್ದು ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿ ನಿಡಘಟ್ಟ ಗ್ರಾಮದ ಶ್ರೀ ರೇವಣ್ಣಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಔಷಧ ವಿತರಣಾ ಹಾಗೂ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಜನರನ್ನು ಇತ್ತೀಚಿಗೆ ಹಲವು ವಿಧದ ಕಾಯಿಲೆಗಳು ಬಾಧಿಸುತ್ತಿದ್ದು, ಪಟ್ಟಣಕ್ಕೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಕಷ್ಟವೆನಿಸುವ ಹಿರಿಯ ನಾಗರೀಕರು, ಆರ್ಥಿಕವಾಗಿ ಕಷ್ಟದಲ್ಲಿರುವವರು, ಇಂತಹ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.
ಯುವಪೀಳಿಗೆಯಲ್ಲಿ ಕ್ರೀಡಾ ಚಟುವಟಿಕೆ ವೃದ್ದಿಸುವ ನಿಟ್ಟಿನಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಉತ್ತಮ ವಿಷಯ. ಇಂತಹ ಶಿಬಿರಗಳ ಆಯೋಜನೆಗೆ ಯಾವುದೇ ರಾಜಕೀಯ ಬೆರೆಸದೇ ಎಲ್ಲರೂ ಒಗ್ಗೂಡಿಸಿ ದೊಡ್ಡಮಟ್ಟದ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಯುವಕರು ತಮ್ಮ ಜೀವನದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಪ್ರಾಧ್ಯಾನ್ಯತೆ ನೀಡಿ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ, ಕುಟುಂಬಕ್ಕೆ ಹಾಗೂ ಗ್ರಾಮಕ್ಕೆ ಒಳ್ಳೆಯ ಹೆಸರನ್ನು ತರಲು ಶಿಕ್ಷಣವಂತರಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಯುವಪೀಳಿಗೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅದನ್ನು ಅನುಷ್ಟಾನಕ್ಕೆ ತರುವ ಕೆಲಸ ಮಾಡಬೇಕು ಎಂದರು.
ನಿಡಘಟ್ಟ ಗ್ರಾಮದ ಸಂಪರ್ಕವು ಅನೇಕ ವರ್ಷಗಳಿಂದ ನಮ್ಮ ಕುಟುಂಬಕ್ಕಿದೆ. ೧೯೮೩ ರಲ್ಲಿ ಎಸ್.ಆರ್. ಲಕ್ಷ್ಮಯ್ಯ ಅವರು ಮೂರು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದವರು. ಹಾಗೂ ಧರ್ಮೇಗೌಡರು ಹಾಗೂ ನಾನು ಸೇರಿದಂತೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಎಲ್ಲರ ಜನರ ಬಾಂಧವ್ಯವನ್ನು ಕಳೆದ ಮೂವತ್ತು ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದು ಅದಕ್ಕೆಲ್ಲಾ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರವೇ ಕಾರಣ ಎಂದು ಸ್ಮರಿಸಿದರು.
ಕಾರ್ಯಕ್ರಮದ ಆಯೋಜಕ ಬಿ.ಎಂ.ತಿಮ್ಮಶೆಟ್ಟಿ ಮಾತನಾಡಿ ಎರಡು ಬಾರಿ ಈ ಕ್ಷೇತ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿ ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಲು ಸ್ಪೂರ್ತಿ ನೀಡಿದೆ. ಶಿಬಿರದ ಉಪಯೋಗವನ್ನು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಪಡೆದುಕೊಳ್ಳುವ ಮೂಲಕ ಯಶಸ್ವಿಗೊಳಿಸಿಕೊಡಬೇಕು ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ಅಜಿತ್ಕುಮಾರ್ ಮಾತನಾಡಿ ನಿಡಘಟ್ಟ ಗ್ರಾಮದಲ್ಲಿ ಉಚಿತವಾಗಿ ತಪಾಸಣಾ ಶಿಬಿರ ಹಾಗೂ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿರುವ ತಿಮ್ಮಶೆಟ್ಟಿಯವರಿಗೆ ಅಭಿನಂದಿಸಿ ಇದೇ ರೀತಿ ಇನ್ನೂ ಹೆಚ್ಚಿನ ಕಾರ್ಯಕ್ರಮವನ್ನು ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.
ಈಗಾಗಲೇ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಅಡಚಣೆಯಾಗಿತ್ತು. ಇಂದಿನ ದಿನ ನಿಡಘಟ್ಟ ಗ್ರಾಮಸ್ಥರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ಇದರ ಉಪಯೋಗವನ್ನು ಪ್ರತಿಯೊಬ್ಬರೂ ಕೂಡಾ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಡಘಟ್ಟ ಗ್ರಾ.ಪಂ. ಸದಸ್ಯೆ ಶ್ರೀಮತಿ ಗೀತಾಂಜಲಿ ಸುರೇಶ್ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಶಂಕರಮೂರ್ತಿ , ವಿಶ್ವನಾಥ್, ಗೀತಾಬಾಬು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಎಸ್.ನಂಜುಂಡಪ್ಪ, ಮಾಜಿ ಅಧ್ಯಕ್ಷ ಸತೀಶ್, ಹಾಲು ಡೈರಿ ಕಾರ್ಯದರ್ಶಿ ದಯಾಂದ್, ಮಾಜಿ ಅಧ್ಯಕ್ಷ ಎಂ.ಪಿ.ಪ್ರಕಾಶ್, ಜಿ.ಪಂ. ಮಾಜಿ ಸದಸ್ಯೆ ಹೇಮಾವತಿ, ಜೆಡಿಎಸ್ ನಗರಾಧ್ಯಕ್ಷ ಎ.ಸಿ.ಕುಮಾರ್, ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ದೇವಿಪ್ರಸಾದ್, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಎನ್.ಕೆ.ನಿಸಾರ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷ ಅಯ್ಯೂಬ್ಖಾನ್, ನಗರಾಧ್ಯಕ್ಷ ಇರ್ಷಾದ್, ಮುಖಂಡರಾದ ದೇವರಾಜ್ಅರಸ್, ಗೋಪಿ, ರೇವಣ್ಣಸಿದ್ದೇಶ್ವರ ಶಾಲೆ ಎಸ್.ಡಿ.ಎಂ.ಎಸಿ. ಅಧ್ಯಕ್ಷ ಮರುಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಿಂಚನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಾಜಿ ತಾ.ಪಂ. ಸದಸ್ಯ ಆನಂದ್ ನಾಯ್ಕ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು.

























Discussion about this post