Health Tips: ಮಕ್ಕಳು ಯಾವ ರೀತಿ ಆಹಾರ ಸೇವನೆ ಮಾಡುತ್ತಾರೋ, ಅವರ ಭವಿಷ್ಯ ಅಷ್ಟು ಆರೋಗ್ಯಕರವಾಗಿರುತ್ತದೆ. ಚಿಕ್ಕಂದಿನಲ್ಲೇ ಅವರಿಗೆ ಜಂಕ್ ಫುಡ್, ಎಣ್ಣೆ ತಿಂಡಿ, ಕುರುಕಲು ತಿಂಡಿ, ಬೇಕರಿ ತಿಂಡಿ, ಚಾಕೋಲೇಟ್ಸ್ ಹೀಗೆ ಅನಾರೋಗ್ಯಕರ ತಿಂಡಿಯೇ ನೀಡಿದರೆ, ಅವರ ಆರೋಗ್ಯವೂ ದಿನಗಳೆದಂತೆ ಹಾಳಾಗಿ ಹೋಗುತ್ತದೆ.
ಹಾಗಾಗಿ ಮಗುವಿಗೆ 2 ವರ್ಷವಾದರೂ ತಾಯಿಯ ಹಾಲು ಕುಡಿಸಬೇಕು. ಬಳಿಕ ಆರೋಗ್ಯಕರವಾದ ಆಹಾರಗಳನ್ನು ನೀಡಬೇಕು. ಅದೇ ರೀತಿ ಮಕ್ಕಳು ಶಾಲೆಗೆ ಹೋಗುವಾಗ, ಅವರಿಗೆ ಆದಷ್ಟು ಆರೋಗ್ಯಕರ ಆಹಾರವನ್ನೇ ನೀಡಬೇಕು. ಶಾಲೆಯಲ್ಲಿ ಹಸಿವಾದಾಗ, ಮಕ್ಕಳು ಟಿಫಿನ್ ಬಾಕ್ಸ್‌ನಲ್ಲಿ ಏನೇ ಇದ್ದರೂ ತಿನ್ನುತ್ತಾರೆ. ಹಾಗಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಆದಷ್ಟು ಜಂಕ್ ಫುಡ್ ಕಡಿಮೆ ಮಾಡಿ, ರುಚಿಕರ ಆರೋಗ್ಯಕರ ಆಹಾರ ನೀಡಬೇಕು.
ಮಕ್ಕಳಿಗೆ ಟಿಫಿನ್ ಬಾಕ್ಸ್‌ನಲ್ಲಿ ಸ್ವಲ್ಪ ಡ್ರೈಫ್ರೂಟ್ಸ್, ನಟ್ಸ್ ಹಾಕಿಕೊಡಿ. ಅಥವಾ ಎಲ್ಲವನ್ನೂ ಸೇರಿಸಿ, ಆರೋಗ್ಯಕರ ಲಡ್ಡು ತಯಾರಿಸಿ ಕೊಡಿ. ಸ್ವಲ್ಪ ಚೇಂಜ್ ಮಾಡಬೇಕು ಎನ್ನಿಸಿದರೆ, ಡಾರ್ಕ್ ಚಾಕೋಲೇಟ್ ಮೆಲ್ಟ್ ಮಾಡಿ, ಡ್ರೈಫ್ರೂಟ್ಸ್ ನಿಂದ ತಯಾರಿಸಿದ ಪುಟ್ಟ ಪುಟ್ಟ ಲಡ್ಡುಗಳನ್ನು ಅದ್ದಿ, ಚಾಕೋಲೇಟ್ ರೆಡಿ ಮಾಡಿ ಕೊಡಿ. ಇದನ್ನು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಅಗತ್ಯಕ್ಕಿಂತ ಹೆಚ್ಚು ಡ್ರೈಫ್ರೂಟ್ಸ್ ಮಕ್ಕಳಿಗೆ ನೀಡಬಾರದು.
ಇನ್ನು ಗಟ್ಟಿ ಆಹಾರ ಹೆಚ್ಚು ನೀಡಿದಷ್ಟು ಉತ್ತಮ. ಅಂದ್ರೆ ಉಪ್ಪಿಟ್ಟು, ಅವಲಕ್ಕಿ, ದೋಸೆ, ಚಪಾತಿ ಇಂಥ ತಿಂಡಿಗಳು. ಇವುಗಳು ಮಕ್ಕಳ ಹೊಟ್ಟೆ ತುಂಬಿಸುವುದರ ಜೊತೆಗೆ, ಮಕ್ಕಳಿಗೆ ಶಕ್ತಿಯನ್ನೂ ನೀಡುತ್ತದೆ. ಇಂಥ ಆಹಾರದಲ್ಲಿ ಆದಷ್ಟು ಸೊಪ್ಪು., ಮೊಳಕೆ ಕಾಳು, ತುಪ್ಪ ಇರುವಂತೆ ನೋಡಿಕೊಳ್ಳಿ. ಸಾಧ್ಯವಾದರೆ, ಸೋಯಾ ಚಂಕ್ಸ್, ಪನೀರ್ ಕೂಡ ಬಳಸಿ. ಇವೆಲ್ಲವೂ ದೇಹಕ್ಕೆ ಪ್ರೊಟೀನ್ ಕೊಡುವ ಆಹಾರಗಳು.
ಶಾಲೆಗೆ ಕಳುಹಿಸುವಾಗ ಮನೆಯಿಂದಲೇ ನೀರಿನ ಬಾಟಲಿಯನ್ನು ಸಹ ಕೊಟ್ಟು ಕಳಿಸಿ. ಯಾಕಂದ್ರೆ ಮಕ್ಕಳು ಹೊರಗಡೆಯ ಆಹಾರ., ನೀರು ಕುಡಿದಷ್ಟು ಅವರ ಆರೋಗ್ಯ ಹೆಚ್ಚು ಹದಗೆಡುತ್ತದೆ. ಹಾಗಾಗಿ ಮನೆಯಲ್ಲಿ ಚೆನ್ನಾಗಿ ಕಾಯಿಸಿ, ತಣಿಸಿದ ನೀರನ್ನೇ ಕೊಡಿ. ಬರೀ ನೀರನ್ನು ಕೊಡುವ ಬದಲು ಕುದಿಸಿದ ನೀರಿನಲ್ಲಿ ಚೆನ್ನಾಗಿ ತೊಳೆದ ಪುದೀನಾ, ತುಳಸಿ, ಶುಂಠಿಯನ್ನು ಕೊಂಚ ಜಜ್ಜಿ ಬೆರೆಸಿಡಿ. ಸ್ವಲ್ಪ ಹೊತ್ತಿಗೆ ನೀರಿಗೆ ಇದರದ್ದೇ ಫ್ಲೇವರ್ ಬರುತ್ತದೆ. ಅಲ್ಲದೇ ಈ ರೀತಿ ನೀರನ್ನು ಕುಡಿದರೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ನೀವು ಬರೀ ಪುದೀನಾ, ತುಳಸಿ. ಶುಂಠಿ ಮಾತ್ರವಲ್ಲದೇ, ಬೇರೆ ದಿನಗಳಲ್ಲಿ ಸೋಂಪು ಅಥವಾ ಜೀರಿಗೆ, ಕೊತ್ತೊಂಬರಿ ಕಾಳನ್ನು ಸಹ ಈ ರೀತಿ ನೀರಿಗೆ ಸೇರಿಸಿ, ಫ್ಲೇವರೇಬಲ್ ನೀರು ಮಾಡಿ ಕೊಡಬಹುದು. ಇಷ್ಟೇ ಅಲ್ಲದೇ ಪ್ರತೀ ದಿನ ಬರೀ ನಾಲ್ಕೇ ನಾಲ್ಕು ಕಾಳು ಪೆಪ್ಪರ್ ಜಜ್ಜಿ ಸಾರು, ಸಾಂಬಾರ್, ರಸಂ, ಸೂಪ್ ಏನು ತಯಾಾರಿಸುತ್ತೀರೋ ಅದಕ್ಕೆ ಹಾಕಿ. ಇದರಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು.
ಮಕ್ಕಳಗೆ ಹಣ್ಣುಗಳನ್ನು ಕಟ್ ಮಾಡಿ ನೀಡಬೇಡಿ. ಆದಷ್ಟು ಪೂರ್ತಿಯಾಗಿರುವ, ಕಟ್ ಮಾಡದ ಹಣ್ಣನ್ನು ತೊಳೆದು ಬಾಕ್ಸ್‌ಗೆ ಹಾಕಿ. ಮತ್ತು ಆ ಹಣ್ಣು ಆದಷ್ಟು ಫ್ರೆಶ್ ಆಗಿರಲಿ. ಆ್ಯಪಲ್, ಬಾಳೆಹಣ್ಣು, ಕಿತ್ತಳೆ, ಇತ್ಯಾದಿ 1 ಹಣ್ಣು ನೀಡಬಹುದು. ಯಾಕಂದ್ರೆ ಕಟ್ ಮಾಡಿ ಹಣ್ಣು ನೀಡಿದರೆ, ಅದರಲ್ಲಿರುವ ಪೋಷಕಾಂಶ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳ ಆರೋಗ್ಯ ಅಷ್ಟು ಉತ್ತಮವಾಗಿರುವುದಿಲ್ಲ.
ಇದರೊಂದಿಗೆ ಮಕ್ಕಳಿಗೆ ಪ್ರತಿದಿನ ನೀಡುವಂಥ ಚಪಾತಿ, ದೋಸೆ, ಇಡ್ಲಿ, ಅನ್ನದ ತಿಂಡಿಯನ್ನು ನೀಡಬಹುದು. ಆದರೆ ಕರಿದ ಪದಾರ್ಥವನ್ನು ಬೆಳಗ್ಗಿನ ತಿಂಡಿಯಲ್ಲಿ ಎಂದಿಗೂ ನೀಡಬೇಡಿ. ಆದಷ್ಟು ಹಸಿ ತರಕಾರಿ, ಮೊಳಕೆ ಕಾಳು, ತುಪ್ಪ, ಮೊಸರು ಇರುವಂಥ ತಿಂಡಿ ಕೊಡಿ.
Discussion about this post