ಚಿಕ್ಕಮಗಳೂರು : ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ವತಿಯಿಂದ ಭಾನುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿ ಪ್ರಿಯದರ್ಶಿನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ, ದೇಶದ ಮೊದಲ ಉಪ ಪ್ರಧಾನ ಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮೋತ್ಸವ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಮೌನಾಚರಣೆ ಮೂಲಕ ಇತ್ತೀಚೆಗೆ ನಿಧನರಾದ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಕಾಂಗ್ರೆಸ್ ಮುಖಂಡ ಡಾ.ವಿನಾಯಕ್ ಅವರ ತಾಯಿ ಸಿಂದಿಗೆರೆಯ ಮಲ್ಲಮ್ಮ ಶೇಖರೇಗೌಡ ಅವರಿಗೆ ಸಂತಾಪ ಸೂಚಿಸಿ ನುಡಿ ನಮನ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಚಳವಳಿಯನ್ನು ದೇಶದಲ್ಲಿ ನಡೆಸಲಾಗಿತ್ತು. ಇಂದು ಭ್ರಷ್ಟ ಬಿಜೆಪಿಯನ್ನು ತೊಲಗಿಸಲು ಚಳವಳಿ ನಡೆಸುವ ಅನಿವಾರ್ಯತೆ ಎದುರಾಗಿದೆ. ಪಕ್ಷ ಸಂಘಟನೆಯ ಮೂಲಕ ಬಿಜೆಪಿಯನ್ನು ತೊಲಗಿಸಬೇಕಾಗಿದೆ ಎಂದರು.
ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ದೇಶದ ಜನರಿಗಾಗಿ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿದರು. ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಅವರು ಶ್ರಮಿಸಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಮುನ್ನಡೆಯಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ದೇಶದಲ್ಲಿ ಎದುರಾಗಿದ್ದ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಸಂಘಟಿತ ಪ್ರಯತ್ನದ ಮೂಲಕ ಸಮರ್ಥವಾಗಿ ಎದುರಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ವೈರಿ ದೇಶಗಳನ್ನು ಎದುರಿಸಲು ರೂಪಿಸಿದ್ದ ಯೋಜನೆಗಳನ್ನು ಕಂಡು ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ದುರ್ಗಿ ಎಂದು ಕರೆದಿದ್ದರು. ಇಡೀ ಜಗತ್ತಿನಲ್ಲಿ ಭಾರತ ಎಂದರೆ ದೊಡ್ಡ ಗೌರವ ಇತ್ತು. ಅಂದು ದೇಶ ಸಂಪಾಸಿದ್ದ ಎಲ್ಲಾ ಗೌರವಗಳನ್ನು ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹರಾಜು ಮಾಡಿದೆ ಎಂದು ಟೀಕಿಸಿದರು.
ಸ್ವತಂತ್ರ ಭಾರತದ ಮೊಟ್ಟ ಮೊದಲ ಉಪ ಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿ ಗಟ್ಟಿ ನಿರ್ಧಾರಗಳ ಮೂಲಕ ಉಕ್ಕಿನ ಮನುಷ್ಯ ಎಂದು ಕರೆಸಿಕೊಂಡಿದ್ದರು. ಇಂದು ಅವರನ್ನು ಬಿಜೆಪಿ ಹೈಜಾಕ್ ಮಾಡಿ ವೋಟಿಗಾಗಿ ದೊಡ್ಡ ಪ್ರತಿಮೆಯನ್ನು ಸ್ಥಾಪಿಸಿದೆ. ಈ ಎಲ್ಲಾ ಬಿಜೆಪಿಯ ನಾಟಕಗಳನ್ನು ದೇಶದ ಜನರು ಬಲ್ಲವರಾಗಿದ್ದಾರೆ ಎಂದರು.
ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಾವು ದೊಡ್ಡ ನಷ್ಟವನ್ನು ತಂದಿದೆ. ಎಲೆಮರೆ ಕಾಯಂತೆ ಅವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕರ್ನಾಟಕದ ಕಣ್ಮಣಿಯಾಗಿದ್ದರು ಎಂದು ಬಣ್ಣಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಫಿ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ದುಡಿದವರನ್ನು ಪಕ್ಷ ಗುರುತಿಸಿ ಸ್ಥಾನಮಾನಗಳನ್ನು ನೀಡಬೇಕು. ಆ ಮೂಲಕ ಪಕ್ಷ ಸಂಘಟಿಸಿ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸೇವಾ ದಳ ಮಾಜಿ ಅಧ್ಯಕ್ಷ ಕೋಟೆ ಆನಂದ್ ಮಾತನಾಡಿ, ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಯುವಜನರು ಪಕ್ಷವನ್ನು ಸ್ವಯಂ ಪ್ರೇರಣೆಯಿಂದ ಸೇರ್ಪಡೆಯಾಗುತ್ತಿದ್ದಾರೆ. ಅವರುಗಳಿಗೆ ಪಕ್ಷದ ಸಿದ್ಧಾಂತದ ಜೊತೆಗೆ ಇಂದಿರಾ ಗಾಂಧಿ ಅವರ ಸಾಧನೆಗಳನ್ನು ತಿಳಿಸುವ ಕಾರ್ಯವನ್ನು ಪಕ್ಷ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಾರ್ಜ್, ಕಾರ್ಯದರ್ಶಿಗಳಾದ ಹಿರೇಮಗಳೂರು ರಾಮಚಂದ್ರ, ಪ್ರಸಾದ್ ಅಮೀನ್, ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೈಯಾದ್ ಆದಿಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಕಾಶ್, ನಾಗಭೂಷಣ್, ಕಾರ್ಯದರ್ಶಿ ಅಮರ್, ಎಚ್.ಸಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಮೋಹನ್, ಮುಖಂಡರಾದ ಸೋಮಶೇಖರ್, ರಫೀಕ್, ಡೊನಾಲ್ಡ್ ಪಿಂಟೋ, ಅಬ್ದುಲ್ ರಹಮಾನ್ ಹಾಜರಿದ್ದರು. ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ನಾಯ್ಡು ಸ್ವಾಗತಿಸಿ, ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶೃದೀಪ್ ವಂದಿಸಿದರು.
Discussion about this post