ಬೆಂಗಳೂರು: ಕೇಂದ್ರೀಯ ತನಿಖಾದಳ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯಗಳ (ಇಡಿ) ಮುಖ್ಯಸ್ಥರ ಅಧಿಕಾರಾವಧಿಯನ್ನು 5 ವರ್ಷಗಳಿಗೆ ವಿಸ್ತರಿಸಲು ಕೇಂದ್ರ ಸರಕಾರಕ್ಕೆ ಆಧಿಕಾರ ನೀಡುವ 2 ಸುಗ್ರೀವಾಜ್ಞೆಗಳನ್ನು ಪ್ರತಿಪಕ್ಷಗಳು ಒಕ್ಕೊರಲಿನಿಂದ ವಿರೋಧಿಸಿವೆ. ಈ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಪತ್ರಕರ್ತರಿಗೆ ತಿಳಿಸಿದ್ದಾರೆ.
“ಸುಗ್ರೀವಾಜ್ಞೆಗಳನ್ನು ಈಗ ಹೊರಡಿಸುತ್ತಿರುವುದೇಕೆ? ಸಿಬಿಐ ಹಾಗೂ ಇಡಿ ಸಂಸ್ಥೆಯಗಳ ಅಧ್ಯಕ್ಷರುಗಳ ಕಾಲಾಅವಧಿಯನ್ನು 2 ವರ್ಷಗಳಿಂದ 5 ವರ್ಷಗಳವರೆಗೆ ವಿಸ್ತರಿಸುವ ಅವಶ್ಯಕತೆಯಾದರೂ ಏನಿದೆ? ಸುಗ್ರೀವಾಜ್ಞೆಗಳನ್ನು ತರುವಂತಹ ತುರ್ತು ಸ್ಥಿತಿ ಏನಿದೆ? ಇದರಿಂದ ದೇಶಕ್ಕೇನಾದರೂ ಆರ್ಥಿಕ ಪ್ರಯೋಜನಗಳಿವೆಯೇ? ದೇಶದ ಕಾನೂನು ಮತ್ತು ಸುವ್ಯವಸ್ಥೆಗಳು ಕುಸಿಯುವ ಸಾಧ್ಯತೆಗಳಿವೆಯೇ? ಯದ್ಧದ ಪರಿಸ್ಥಿತಿಯೇನಾದರೂ ಉದ್ಭವಿಸಿದೆಯೇ? ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಯನ್ನೇ ಕರೆದಿದ್ದಾರೆ ಖರ್ಗೆ.
ಸಂಸತ್ತಿನ ಅಧಿವೇಶನ ಪ್ರಾರಂಭವಾಗುವವರೆಗೂ ಅವರು ಕಾಯಬಹುದಿತ್ತು. ಸಂಸತ್ತಿನಲ್ಲಿ ಕಾನೂನನ್ನು ತಂದು ಗಂಭೀರ ಚರ್ಚೆಯಾದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಬಹುದಿತ್ತು. ಸಂಸದೀಯ ಕಾನೂನುಗಳು ಹಾಗೂ ಕ್ರಮಗಳನ್ನು ಅನುಸರಿಸದೇ ಹಿಂಬಾಗಿಲಿನ ಮೂಲಕ ಸುಗ್ರಿವಾಜ್ಞೆಗಳನ್ನು ತರುವ ಪ್ರಯತ್ನ ಸರಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟರು. ಬಹುಮತವಿರುವುದರಿಂದ ಏನು ಬೇಕಾದರೂ ಮಾಡಬಹುದೆಂಬುದನ್ನು ವಿರೋಧಿಗಳಿಗೆ ತೋರಿಸುವ ಸಲುವಾಗಿ ಹೀಗೆ ಮಾಡುತ್ತಿದ್ದು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಹೊಸತೇನಲ್ಲ ಎಂದಿದ್ದಾರೆ.
ಈ ಮುನ್ನ ಆರ್ಥಿಕ ಸಚಿವಾಲಯದ ಅಧೀನದಲ್ಲಿದ್ದ ಜಾರಿ ನಿರ್ದೇಶನಾಲಯ (ಇಡಿ)ವನ್ನು ಗೃಹ ಸಚಿವಾಲಯದ ಅಧೀನಕ್ಕೆ ತಂದಿದ್ದಾರೆ ಹಾಗೂ ಸಹಕಾರ ಇಲಾಖೆಯನ್ನು ಕೃಷಿ ಸಚಿವಾಲಯದಿಂದ ಹೊರ ತರಲಾಗಿದೆ. ಈಗ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳ ಮುಖ್ಯಸ್ಥರ ಅವಧಿಗಳನ್ನು ವಿಸ್ತರಿಸುವ ಮೂಲಕ ತಮಗೆ ಬೇಕಾದವರನ್ನು ಆ ಸ್ಥಾನಗಳಲ್ಲಿ ಕೂರಿಸಿ ಸಾಮಾನ್ಯ ಜನರಿಗೆ, ವಿರೋಧಪಕ್ಷಗಳಿಗೆ, ಪತ್ರಕರ್ತರಿಗೆ, ಹಾಗೂ ಸರಕಾರೇತರ ಸಂಸ್ಥೆಗಳಿಗೆ ತೊಂದರೆ ಕೊಡುವ ಯೋಜನೆ ಹೊಂದಿದ್ದಾರೆಂದು ಖರ್ಗೆ ತಿಳಿಸಿದ್ದಾರೆ.
ನಮ್ಮದು ಪ್ರಜಾಸತ್ತಾತ್ಮಕ ವ್ಯವಸ್ಥೆಯಿರುವ ದೇಶವಾಗಿದ್ದು ಸರಕಾರದ ಈ ಕ್ರಮಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದರು. ಈ ಹಿಂದೆ ಯಾವ ಪ್ರಧಾನಿಯೂ ಇಷ್ಟೊಂದ ಆತುರದಿಂದ ಸುಗ್ರಿವಾಜ್ಞೆಗಳನ್ನು ತರುವ ಪ್ರಯತ್ನ ಮಾಡಿರಲಿಲ್ಲವೆಂದ ಖರ್ಗೆ ಇಲ್ಲಿಯವರೆಗೆ ನೂರಾರು ಸುಗ್ರೀವಾಜ್ಞೆಗಳನ್ನು ತರಲಾಗಿದ್ದು ಅವುಗಳ ಜೊತೆಗೆ ಇವೆರಡನ್ನೂ ತರುವ ಅವಶ್ಯಕತೆಯೇನಿದೆಯೆಂದು ಪ್ರಶ್ನಿಸಿದ್ದಾರೆ. ಪ್ರಜಾಪ್ರಭುತ್ವದ ಕ್ರಮಗಳನ್ನು ಅನುಸರಿಸದೇ ಅದನ್ನು ಕೊಲ್ಲುವ ಪ್ರಯತ್ನವನ್ನು ಇವರು ಮಾಡುತ್ತಿದ್ದು ಸಂವಿಧಾನವನ್ನೂ ನಾಶಪಡಿಸುತ್ತಿದ್ದಾರೆಂದು ಖರ್ಗೆ ಆರೋಪಿಸಿದ್ದಾರೆ. ಬಹುಮತದ ಅಹಂಕಾರದಿಂದ ಮುಂದಿನ 100 ವರ್ಷಗಳ ಕಾಲ ದೇಶವನ್ನು ಆಳುತ್ತೇವೆಂದು ಭಾವಿಸಿರುವ ಇವರು ಸರ್ವಾಧಿಕಾರಿಗಳಾಗಬೇಕೆಂದು ಬಯಸಿದ್ದಾರೆಂದೂ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ನಾವು ಇದನ್ನು ತೀವ್ರವಾಗಿ ವಿರೋಧಿಸುತ್ತೇವೆಂದು ಖರ್ಗೆ ಹೇಳಿದ್ದಾರೆ.
Mallikarjuna Kharge criticizes the Central Government for extending the Tenures of Chiefs of CBI and ED to 5 years
ಇನ್ನೂ ಇದೆ: Dalits: ಪಕ್ಷಗಳ ರಾಜಕೀಯ ಲಾಭಕ್ಕಾಗಿ ದಲಿತರ ಬಳಕೆ: ಹರೀಶ್ ಮಿತ್ರ ಆರೋಪ
ಇನ್ನೂ ಇದೆ: Heavy rain: ನವೆಂಬರ್ 20ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಧಿಕ ಮಳೆ
Discussion about this post