ಚಿಕ್ಕಮಗಳೂರು: ನಮ್ಮ ಪ್ರಾಚೀನ ಕಲೆಗಳೇ ಸಂಸ್ಕೃತಿಯ ಬೇರು, ಅದು ಗ್ರಾಮೀಣ ಪರಿಸರದ ಮೂಲೆ-ಮೂಲೆಗೂ ತಲುಪಬೇಕು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಕಳಸದ ಪ್ರಬೋಧಿನಿ ವಿದ್ಯಾ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಅಮೃತ ಸ್ವಾತಂತ್ರ್ಯೋತ್ಸವದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಷ್ಟ ಕಲೆಗಳಾದ ಗಮಕ, ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ನೃತ್ಯ ಮೊದಲಾದ ಕಲೆಗಳ ಸಂವರ್ಧನೆಗೆ ಇಂತಹ ಕಾರ್ಯಕ್ರಮಗಳ ಮೂಲಕ ಮುನ್ನೆಲೆಗೆ ಬಂದು ಅವಕಾಶದ ಸದುಪಯೋಗವನ್ನು ಪಡೆದುಕೊಂಡು ಸಂಸ್ಕೃತಿಯನ್ನು ಕಟ್ಟುವಂತಹ ಕೆಲಸವನ್ನು ಮಾಡಬೇಕಿದೆ ಎಂದರು.
ಅತ್ಯಂತ ಪ್ರಾಚೀನ ಕಲೆಯಾದ ಗಮಕದ ಕರ್ಣಪರ್ವದ ಪ್ರಸಂಗವನ್ನು ಸುಮಾರು ಒಂದು ಗಂಟೆಗಳ ಕಾಲ ಆಲಿಸಿ ಇದರ ಮುಂದಿನ ಭಾಗಗಳನ್ನು ನಮ್ಮೂರಿನ ಅನೇಕ ಕಡೆಗಳಲ್ಲಿ ಆಯೋಜಿಸುವುದಾಗಿ ತಿಳಿಸಿದರು.
ಅಕಾಡೆಮಿಯ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಅವರ ಸಾರಥ್ಯದಲ್ಲಿ ಸಂಗೀತ ನೃತ್ಯ ಅಕಾಡೆಮಿಯು ಕಳಸಾ ಹೊರನಾಡಿನಂತಹ ಮೂಲೆ ಮೂಲೆಯ ಊರುಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಮಾದರಿಯಾಗಿದ್ದಾರೆ. ಅಲ್ಲಿರುವ ಎಲೆಮರೆಯ ಕಾಯಿಯಂತಹ ಪ್ರತಿಭೆಗಳನ್ನು ತೆರೆಗೆ ತಂದು ಗುರುತಿಸಿ ಅವಕಾಶ ನೀಡುತ್ತಿರುವ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಾರ್ಯ ಶ್ಲಾಘನೀಯ ಎಂದರು.
ಅಕಾಡೆಮಿ ಸದಸ್ಯೆ ರೇಖಾ ಪ್ರೇಮ್ಕುಮಾರ್ ಮಾತನಾಡಿ, ಶಿಷ್ಟ ಕಲಾ ಪ್ರಕಾರಗಳಾದ ಗಮಕ, ಹರಿಕಥೆ, ಸಂಗೀತ ಮೊದಲಾದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ನಿವೇದಿತಾ ಗಜೇಂದ್ರ ತಂಡದಿಂದ ಶಾಸ್ತ್ರೀಯ ಸಂಗೀತ, ಪಂಡಿತ್ ಸುರೇಶ್ ಜಂಬಲದಿನ್ನಿ ನರಸಿಂಹರಾಜಪುರ ಅವರಿಂದ ಹಿಂದೂಸ್ತಾನಿ ಗಾಯನ, ಕೊಪ್ಪದ ನಾಗರತ್ನ ಗೋಗಟೆ ಅವರಿಂದ ಸುಗಮ ಸಂಗೀತ, ಚಿಕ್ಕಮಗಳೂರಿನ ವಿದುಷಿ ಸುಮನ ರಾಮಚಂದ್ರ ತಂಡದವರಿಂದ ಭರತನಾಟ್ಯ, ಗಾಯತ್ರಿ ಉಂಟವಳ್ಳಿ ಮತ್ತು ಅರವಿಂದ ಸಿಗದಾಳು ಅವರಿಂದ ಗಮಕ ವಾಚನ ವ್ಯಾಖ್ಯಾನ ನಡೆಯಿತು.
ಪ್ರಭೋದಿನಿ ವಿದ್ಯಾ ಕೇಂದ್ರದ ಅಧ್ಯಕ್ಷ ವೆಂಕಟಸುಬ್ಬಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯಾ ಸದಾನಂದ, ರಾಘವೇಂದ್ರ ಭಟ್, ಕವಿ ಬಾಲಕೃಷ್ಣ ಕಾಮತ್, ಕವಿತಾ, ವೀಣಾಭಟ್ ಪಟ್ಟಣ ಪಂಚಾಯಿತಿ ಸದಸ್ಯ ಶ್ರಿಶೇಷಗಿರಿ ನಾಗೇಶ್, ರಘುನಾಥ್, ರಮೇಶ್ ಇದ್ದರು.
ಇ-ಪೇಪರ್: e Paper – October 20, 2021

























Discussion about this post