ಚಿಕ್ಕಮಗಳೂರು: ಕರಾಳ ಕೃಷಿ ತಿದ್ದ್ದುಪಡಿ ಮಸೂದೆಗಳ ವಿರುದ್ದ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರೈತರನ್ನು ರಕ್ಷಿಸಿ-ಸಂವಿಧಾನ ಉಳಿಸಿ ಹೆಸರಿನಲ್ಲಿ ಅ.೨೭ ರಂದು ಕುವೆಂಪು ಕಲಾಮಂದಿರದಲ್ಲಿ ಬೆಳಗ್ಗೆ ೧೧ ಗಂಟೆಗೆ ವಿಚಾರ ಸಂಕಿರಣ ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವಂತೆ ಜನಸಂಸ್ಕೃತಿ ವೇದಿಕೆ ವತಿಯಿಂದ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಹೆಚ್.ಹೆಚ್. ದೇವರಾಜ್ ಮನವಿ ಮಾಡಿದರು.
ನಗರದ ಪತ್ರಿಕಾಗೋಷ್ಟಿಯಲ್ಲಿ ಕರಪತ್ರಗಳನ್ನು ಬಿಡುಗಡೆಗೊಳಿಸುವ ಮೂಲಕ ಮಾತನಾಡಿದ ಅವರು ರೈತರಿಗೆ ಮಾರಕವಾಗಿರುವ ಕೃಷಿ ತಿದ್ದಪಡಿ ಮಸೂದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಿರಂತರ ಚಳುವಳಿ ನಡೆಸುತ್ತಿದ್ದು ಒಂದು ವರ್ಷ ಕಳೆದಿದೆ. ೭೦೦ ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ದೇಶದಲ್ಲಿ ವಿಕೃತ ಮನಸ್ಸಿನ ಹಿಟ್ಲರ್ ಆಡಳಿತ ವ್ಯವಸ್ಥೆ ಅಸ್ಥಿತ್ವದಲ್ಲಿದೆ ಎಂಬ ಮನಧೋರಣೆ ಕಾಡುತ್ತಿದೆ ಎಂದು ಕೇಂದ್ರದ ನಡೆಯ ವಿರುದ್ದ ವಾಗ್ದಾಳಿ ನಡೆಸಿದರು.
ಕರಾಳ ಮಸೂದೆಯ ವಿರುದ್ದವಾಗಿ ರೈತರಿಗೆ ಜನಜಾಗೃತಿ ಅಗತ್ಯವಿದ್ದು ಆ ನಿಟ್ಟಿನಲ್ಲಿ ಪಕ್ಷಾತೀತವಾಗಿ ಜನಸಂಸ್ಕೃತಿ ವೇದಿಕೆ ಹಾಗೂ ವಿವಿಧ ಪಕ್ಷ ಸಂಘಟನೆಗಳ ಸಹಯೋಗದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಹೆಚ್,ಎನ್, ನಾಗಮೋಹನ್ ದಾಸ್ ವಿಚಾರ ಮಂಡನೆ ಮಾಡಲಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವ್ಯವಸ್ಥೆಯಲ್ಲಿ ರೈತರ ಮೇಲೆ ಹಲ್ಲೆ, ದಬ್ಬಾಳಿಕೆ ಹೆಚ್ಚುತ್ತಿವೆ ಉತ್ತರ ಪ್ರದೇಶದಲ್ಲಿ ಸಚಿವರ ಪುತ್ರ ನ್ಯಾಯಯುತವಾಗಿ ಚಳುವಳಿ ನಡೆಸುತ್ತಿದ್ದ ರೈತರ ಮೇಲೆ ಕಾರು ಚಲಾಯಿಸಿ ಹತ್ಯೆ ಮಾಡುವ ಮೂಲಕ ವಿಕೃತಿ ತೋರಿದ್ದಾನೆ ಆತನನ್ನು ದೇಶದಿಂದ ಗಡಿಪಾರು ಮಾಡಬೇಕು, ನೈತಿಕ ಹೊಣೆ ಹೊತ್ತು ಪ್ರಧಾನಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ ದೇಶದ ಬೆನ್ನುಲೆಬು ಎನಿಸಿಕೊಳ್ಳುವ ರೈತರ ಬೆನ್ನು ಮುರಿಯಲು ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರೂಪಿಸಿದೆ. ಸಂವಿಧಾನಕ್ಕೆ ವಿರುದ್ಧವಾಗಿ ದೇಶಕ್ಕೆ ಮಾರಕವಾಗಿರುವ ಕಾಯ್ದೆಗಳ ಮೂಲಕ ರೈತರನ್ನು ಬೀದಿಪಾಲು ಮಾಡಲು ಮುಂದಾಗಿದೆ. ಈ ಬಗ್ಗೆ ಜನಜಾಗೃತಿ ಅಗತ್ಯವಿದ್ದು ಆ ನಿಟ್ಟಿನಲ್ಲಿ ಅ. ೨೭ ರಂದು ನಡೆಯುವ ವಿಚಾರ ಸಂಕಿರಣದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾಹಿತಿ ತಿಳಿದುಕೊಳ್ಳುವಂತೆ ಸಲಹೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಮಾತನಾಡಿ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎನ್ನುವ ಸರ್ಕಾರ ಈಗಾಗಲೇ ರಸಗೊಬ್ಬರ, ಬಿತ್ತನೆ ಬೀಜಗಳು, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಸಂಕಷ್ಟಕ್ಕೆ ದೂಡಿದೆ. ಕೃಷಿ ತಿದ್ದುಪಡಿ ಕಾಯ್ದೆ ವಿರುದ್ದ ರೈತರು ಚಳುವಳಿ ನಡೆಸುತ್ತಿದ್ದು ರೈತರ ಹೋರಾಟವನ್ನು ಹತ್ತಿಕ್ಕುವ ಮೂಲಕ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಮುಂದಾಗಿದೆ. ಎಂದು ಕಿಡಿಕಾರಿದರು.
ಈಗಾಗಲೇ ಎಪಿಎಂಸಿಯನ್ನು ದುರ್ಬಲಗೊಳಿಸಿ ಕಾರ್ಪೋರೇಟ್ ಕಂಪನಿಗಳನ್ನು ಉದ್ದಾರ ಮಾಡಲು ತಿದ್ದುಪಡಿ ತರಲು ಮುಂದಾಗಿದೆ. ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಿಲ್ಲ, ಆಹಾರ ಭದ್ರತೆ ಇಲ್ಲ, ಖಾಸಗೀಕರಣದ ಮೂಲಕ ಬಂಡವಾಳ ಷಾಹಿಗಳ ಪರವಾದ ಆಡಳಿತ ನಡೆಸುತ್ತಿದೆ. ಈ ಬಗ್ಗೆ ಕಾನೂನಾತ್ಮಕವಾಗಿ ರೈತರಿಗೆ ಹೆಚ್ಚಿನ ತಿಳುವಳಿಕೆ ಅಗತ್ಯವಿದೆ ಆ ನಿಟ್ಟಿನಲ್ಲಿ ನಾಗಮೋಹನ್ ದಾಸ್ ಅವರು ರೈತರನ್ನು ರಕ್ಷಿಸಿ-ಸಂವಿಧಾನ ಉಳಿಸಿ ಎಂಬ ವಿಚಾರದಲ್ಲಿ ವಿಚಾರ ಮಂಡನೆ ಮಾಡಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸಿಪಿಐ ಮುಖಂಡ ಅಮ್ಜದ್ ಮಾತನಾಡಿ ರೈತರ ಬಗ್ಗೆ ಕಾಳಜಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ರೈತರ ಸಮಸ್ಯೆಗಳನ್ನು ಯಾಕೆ ಆಲಿಸುತ್ತಿಲ್ಲ? ಎಂದು ಪ್ರಶ್ನಿಸಿದರು. ರೈತರು, ಅಥವಾ ಸರ್ವಪಕ್ಷಗಳ ಸಭೆಯನ್ನು ನಡೆಸದೇ ಸರ್ವಾಧಿಕಾರಿ ಧೋರಣೆ ಮೂಲಕ ಮಾರಕ ಕಾಯ್ದೆಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ರೈತರ ಸಮಾಧಿ ಮೇಲೆ ರಾಜ್ಯಭಾರ ಮಾಡುವ ಸಕಾರ ಇದು ಅಂತ ಕಿಡಿಕಾರಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ ಮುಖಂಡ ರೇಣುಕಾರಾಧ್ಯ, ರೈತಮುಖಂಡ ಗುರುಶಾಂತಪ್ಪ, ರವೀಶ್ ಕ್ಯಾತನಬೀಡು, ಉಪಸ್ಥಿತರಿದ್ದರು.

























Discussion about this post