ಚಿಕ್ಕಮಗಳೂರು: ಪ್ರತಿಷ್ಠಿತ ನಗರದ ಡಿಎಸಿಜಿ ಪಾಲಿಟೆಕ್ನಿಕ್ ಕಟ್ಟಡ ಆಡಳಿತ ಮಂಡಳಿಯ ಬೇಜವಾಬ್ದಾರಿ ನಿರ್ವಹಣೆ ಕೊರತೆಯಿಂದ ಚರಂಡಿಯಲ್ಲಿ ನೀರುಸರಾಗವಾಗಿ ಹರಿಯಲಾಗದೆ ನಿಂತಿದ್ದು, ಇದೇರೀತಿ ಮಳೆನೀರು ನಿಂತುಕೊಂಡರೆ ನಿರಂತವಾಗಿ ಗೋಡೆ ನೆನೆದು ಕುಸಿಯುವ ಹಂತ ತಲುಪಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ರತ್ನಗಿರಿ ರಸ್ತೆಯಲ್ಲಿರುವ ಸರ್ಕಾರಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಸೇರಿರುವ ಧರ್ಮಪ್ರಕಾಶ ಅರಳುಗುಪ್ಪೆ ಚಂದ್ರೇಗೌಡ ಸರ್ಕಾರಿ ಪಾಲಿಟೆಕ್ನಿಕ್ ೧೯೫೮ ರಲ್ಲಿ ದಾನಿಗಳ ನೆರವಿನಿಂದ ಆರಂಭಗೊಂಡಿದ್ದು, ಜಿಲ್ಲೆಯ ಯುವಕ, ಯುವತಿಯರಿಗೆ ತಾಂತ್ರಿಕ ವಿದ್ಯಾಭ್ಯಾಸ ಮಾಡಲು ಸಹಕಾರಿಯಾಯಿತು.
ಈ ಪಾಲಿಟೆಕ್ನಿಕ್ನಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಸರ್ಕಾರದ ನಿರ್ಲಕ್ಷ್ಯದಿಂದ ಸರಿಯಾದ ನಿರ್ವಹಣೆ ಮಾಡದೆ ಪಾಲಿಟೆಕ್ನಿಕ್ ಕಟ್ಟಡ ಬೀಳುವಂತಾಗಿದೆ ಎಂದು ದೂರಿದ್ದಾರೆ.
ಈ ಕಾಲೇಜು ಕಟ್ಟಡದ ಬಲಭಾಗದಲ್ಲಿ ಕಟ್ಟಡದ ಉದ್ದಕ್ಕೂ ಮಳೆಯಿಂದಾಗಿ ೨ ಅಡಿ ನೀರು ನಿಂತಿದ್ದು, ಕಳೆದ ೧೫ ದಿನದಿಂದ ನೀರು ಹೊರಹೋಗಲಾಗದೆ ನಿಂತಲ್ಲೆ ನಿಲ್ಲುವಂತಾಗಿದೆ. ಛಾವಣಿಯಿಂದ ಬೀಳುವ ನೀರು ಹೊರ ಹೋಗಲು ಸಹಕಾರಿಯಾಗುವಂತೆ ಚರಂಡಿ ನಿರ್ಮಿಸಿ ರಾಜಕಾಲುವೆಗೆ ನೀರು ಹರಿಯುವಂತೆ ಮಾಡಲಾಗಿದ್ದರೂ ಚರಂಡಿಯಲ್ಲಿ ಹೂಳುತುಂಬಿ ಕಸಕಡ್ಡಿತುಂಬಿರುವುದರಿಂದ ಚರಂಡಿಯೇ ಮುಚ್ಚಿಹೋಗಿದ್ದು, ನೀರು ನಿಲ್ಲಲು ಕಾರಣವಾಗಿದೆ.
ಕಳೆದ ಹಲವು ದಿನಗಳಿಂದ ಪ್ರತಿದಿನ ನಗರದಲ್ಲಿ ಮಳೆ ಬರುತ್ತಿದೆ ಮಳೆ ನೀರು ಹೊರ ಹೋಗಲು ಆಗದೆ ಕಟ್ಟಡಕ್ಕೆ ತಾಕಿಕೊಂಡಿದ್ದು, ಮಳೆ ನಿರಂತರವಾಗಿ ಬರಲಾರಂಭಿಸಿದರೆ ಗೋಡೆ ತೇವಾಂಶವನ್ನು ಎಳೆದು ಬೀಳುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ಕಟ್ಟಡದ ಹಿಂಭಾಗದಲ್ಲಿ ಕೂಡಾ ಮೆಕಾನಿಕಲ್ ತಾಂತ್ರಿಕ ವಿಭಾಗದ ಕಟ್ಟಡಕ್ಕೆ ಮಳೆ ನೀರು ನುಗ್ಗಿದ್ದು, ಅಲ್ಲಿ ಕೆರೆ ನಿರ್ಮಾಣವಾದಂತಾಗಿದೆ. ಇತ್ತೀಚೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭ ಮಾಡುವ ಉದ್ದೇಶದಿಂದ ಇರುವ ಕಟ್ಟಡದ ಮೇಲೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಮಳೆ ಬಿಸಿಲಿಗೆ ಕೊಠಡಿಯಲ್ಲಿರುವ ಪೀಠೋಪಕರಣಗಳು ಹಾಳಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗಾಗಲೇ ಕಾಲೇಜು ಆರಂಭಗೊಂಡಿದ್ದು ನೂರಾರು ಮಕ್ಕಳು ಈ ಕಟ್ಟಡದಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಕಟ್ಟಡದ ಸಮರ್ಪಕ ನಿರ್ವಹಣೆ ಕೊರತೆಯಿಂದ ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Polytechnic at the point of declining maintenance deficit?
ಇದನ್ನೂ ಓದಿ: Singing: ಇಂದು ‘ಕನ್ನಡಕ್ಕಾಗಿ ನಾವು’ ಸಾಮೂಹಿಕ ಗಾಯನ
ಇದನ್ನೂ ಓದಿ: DA: ಸರಕಾರಿ ನೌಕರರಿಗೆ ಶೇ. 3ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳ

























Discussion about this post