ಚಿಕ್ಕಮಗಳೂರು : ಮಹಾಪುರುಷರ ಜಯಂತಿ ಆಚರಣೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಜಾತೀಯತೆಯನ್ನು ತೊಡೆದು ಹಾಕುವ, ಸಾಮರಸ್ಯವನ್ನು ಬೆಸೆಯುವಂತಿದ್ದಾಗ ಜಯಂತಿಗಳ ಆಚರಣೆಗೆ ಸಾರ್ಥಕತೆ ಸಿಗಲಿದೆ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅಭಿಪ್ರಾಯಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಜಯಂತಿಗಳ ಆಚರಣೆ ಉದ್ದೇಶವೇನು ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ. ಪುಸ್ತಕಗಳಲ್ಲಿ ಓದಿ ತಿಳಿದಂತೆ ಮಹರ್ಷಿ ಕ್ರೂರಿ, ದರೋಡೆಕೋರೆಯಾಗಿದ್ದ ಬಳಿಕ ಮನಃಪರಿವರ್ತನೆ ಹೊಂದಿ ಶ್ರೇಷ್ಟ ಮಹಾಕಾವ್ಯವನ್ನು ರಚಿಸುವ ಮೂಲಕ ಆದರ್ಶ ಪ್ರಾಯನಾಗಿದ್ದಾರೆ ಎಂದು ಸ್ಮರಿಸಿದರು.
ಬದುಕಿನಲಿ ಉತ್ತಮ ವ್ಯಕ್ತಿತ್ವ ಹೊಂದುವ ಮೂಲಕ ಬದಲಾವಣೆಗಳನ್ನು ತಂದುಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಬೇಕು. ವಾಲ್ಮೀಕಿಯವರಂತೆ ಪಾಂಡಿತ್ಯವನ್ನು ಪಡೆಯಲು ನಿರಂತರ ಪರಿಶ್ರಮ, ಸಕರಾತ್ಮಕ ಆಲೋಚನೆಗಳ ನಮ್ಮಲ್ಲಿ ಮೂಡಬೇಕು, ಜಯಂತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸದೇ, ಜಾತಿ, ರಾಗ, ದ್ವೇಷವನ್ನು ತೊಡೆದುಹಾಕಿ ಸಾಮರಸ್ಯವನ್ನು ಮೂಡಿಸಿದಾಗ ಮಹಾತ್ಮರ ಜಯಂತಿಗಳ ಆಚರಣೆಗೆ ಸಾರ್ಥಕತೆ ಸಿಗಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆದಿಕವಿ ಮಹರ್ಷಿ ವಾಲ್ಮೀಕಿಯು ರಾಮಾಯಣವನ್ನು ರಚಿಸಿದರು ಮತ್ತು ಎಲ್ಲರಿಗೂ ಸರಿಯಾದ ಮಾರ್ಗದಲ್ಲಿ ನಡೆಯುವ ಮಾರ್ಗವನ್ನು ತೋರಿಸಿದರು. ಪವಿತ್ರ ಪುಸ್ತಕ ರಾಮಾಯಣದಲ್ಲಿ ಪ್ರೀತಿ, ತ್ಯಾಗ, ದೃಢತೆ ಮತ್ತು ಖ್ಯಾತಿಯ ಭಾವನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ ಎಂದು ತಿಳಿಸಿದರು.
ರಾಮಾಯಣ ಮಹಾಕಾವ್ಯವು ೨೪,೦೦೦ ಶ್ಲೋಕಗಳನ್ನು ಹೊಂದಿದ್ದು. ವಾಲ್ಮೀಕಿಯವರು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಜೀವನಕ್ಕೆ ಬೇಕಾದ ಆದರ್ಶ, ಮೌಲ್ಯಗಳು ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯವಾಗಿದೆ. ಹಣ ಗಳಿಕೆಗಿಂತ ಪ್ರೀತಿ ಗಳಿಕೆ ಮೌಲ್ಯಯುತವಾದುದು, ಸಮಯಪಾಲನೆ, ಕೌಟುಂಬಿಕ ಪರಿಕಲ್ಪನೆ, ನಾಯಕತ್ವಗುಣ, ಒಗ್ಗಟ್ಟು ಮುಂತಾದ ಸಂದೇಶಗಳನ್ನು ಸಾರಿದೆ ಎಂದರು.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರು ಡಾ. ಶುಭಾ ಮರವಂತೆ ಉಪನ್ಯಾಸದಲ್ಲಿ ಮಾತನಾಡುತ್ತಾ ಸಾಹಿತ್ಯ ಪರಂಪರೆಯ ಮೂಲಧಾತು ರಾಮಯಣದಲ್ಲಿದೆ. ಇಂದಿನ ಕೌಟುಂಬಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವ ಸಂದರ್ಭ ರಾಮಾಯಣದ ಅಗತ್ಯವಿದೆ ಎಂದರು.
ಸಮಾಜ ಜಾತಿ ವ್ಯವಸ್ಥೆಯ ಕೂಪದಲ್ಲಿದೆ. ಕ್ರಿ.ಪೂ ೩ನೇ ಶತಮಾನದಲ್ಲಿ ವರ್ಣ ವ್ಯವಸ್ಥೆ ಎಂಬುದು ಇರಲಿಲ್ಲ ಮಹರ್ಷಿ ವಾಲ್ಮೀಕಿಯವರು ಬುಡಕಟ್ಟು ಜನಾಂಗಕ್ಕೆ ಸೇರಿದವರು, ಅವರನ್ನು ಕೆಲವೊಂದು ಪುಸ್ತಕದಲ್ಲಿ ಕ್ರೂರಿ, ದರೋಡೆಕೋರ ಎಂದೆಲ್ಲ ಉಲ್ಲೇಖಿಸಲಾಗಿದೆ. ತಪ್ಪು ಕಲ್ಪನೆಗಳನ್ನು ಅರಿಯಬೇಕಿದೆ ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯತೆ ಹೊಂದಿದ ಗುರುಗಳು, ಮಹಿಳಾ ಸ್ಥಾನಮಾನ, ಸತ್ಯ ನಿಷ್ಟೆ, ಮಾನವೀಯತೆ, ಸಹಬಾಳ್ವೆ, ಪ್ರಾಮಾಣಿಕತೆಯ ಅಂಶಗಳನ್ನು ರಾಮಾಯಣದಲ್ಲಿ ಉಲ್ಲೇಖಿಸಿ ಬರೆದಿದ್ದಾರೆ ಅವರನ್ನು ವಿಶ್ವಬಂಧುತ್ವದ ನೆಲೆಯಲ್ಲಿ ಕಾಣಬೇಕಿದೆ ಎಂದು ಹೇಳಿದರು.
ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಜಿ.ಕೆ. ಭೀಮಪ್ಪ ಮಾತನಾಡಿ ವಾಲ್ಮೀಕಿ ನಾಯಕ ಸಮಾಜದ ನಕಲಿ ಜಾತಿ ಪ್ರಮಾಣ ಪತ್ರಗಳ ತರೀಕೆರೆ ಕೇಂದ್ರದಲ್ಲಿ ಹೇರಳವಾಗಿದ್ದು ಈ ಬಗ್ಗೆ ಜಿಲ್ಲಾಡಳಿತ ಕ್ರಮವಹಿಸಬೇಕು, ಸಮುದಾಯ ಭವನ ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು, ಎಸ್.ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ವಿದ್ಯಾರ್ಥಿ ವೇತನ ನೀಡಬೇಕು, ಸಮಾಜದ ಏಳಿಗೆ ನಿಟ್ಟಿನಲ್ಲಿ ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಕೇಳಿಕೊಂಡರು.
ಇದೇ ವೇಳೆ ಎಸ್.ಎಸ್.ಎಲ್.ಸಿ. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್, ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ಜಿಲ್ಲಾ ಸರ್ಜನ್ ಡಾ. ಮೋಹನ್, ತಹಸೀಲ್ದಾರ್ ಡಾ. ಕಾಂತರಾಜ್, ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಯುವಕ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಕೋಟೆ, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ್ ಸೇರಿದಂತೆ ಮತ್ತಿತರರು ಇದ್ದರು.

























Discussion about this post