ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಈಗ ಗುರುಗ್ರಹದ ಕ್ಷುದ್ರಗ್ರಹಗಳ (ಆಸ್ಟ್ರಾಯ್ಡ್) ಹಿಂದೆ ಬಿದ್ದಿದೆ. ಇದಕ್ಕಾಗಿ 12 ವರ್ಷಗಳ ಕಾಲ ಪರಿಶೋಧನೆ ನಡೆಸುವ ‘ಲೂಸಿ’ ಗಗನನೌಕೆಯನ್ನು ಫ್ಲಾರಿಡಾದ ಕೇಪ್ ಕ್ಯಾನವರಲ್ನಿಂದ ಶನಿವಾರ ಬೆಳಗ್ಗೆ 5.34ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 3) “ದಿ ಅಟ್ಲಾಸ್ -5” ರಾಕೆಟ್ ಮೂಲಕ ಉಡಾವಣೆ ಮಾಡಲಿದೆ. ಬೃಹಸ್ಪತಿಯ ಟ್ರೋಜನ್ ಕ್ಷುದ್ರಗ್ರಹದ ಸಮೂಹವನ್ನು ಗುರಿಯಾಗಿರಿಸಿಕೊಂಡು ಈ ಯೋಜನೆ ರೂಪಿಸಿರುವ ನಾಸಾ, ಇದರ ಅಧ್ಯಯನದ ಮೂಲಕ ಸೌರವ್ಯೂಹದ ಸಂರಚನೆಯ ಬಗ್ಗೆ ಹೊಸ ಹೊಳಹುಗಳನ್ನು ಹುಡುಕಲಿದೆ.
ಗುರು ಮತ್ತು ಅಂಗಾರಕನ ಮಧ್ಯೆ ಸೂರ್ಯನನ್ನು ಸುತ್ತುತ್ತಿರುವ ಟ್ರೋಜನ್ ಸಮೂಹವು ಹೆಬ್ಬಂಡೆಗಳಿಂದ ಕುಬ್ಜಗ್ರಹಗಳ ಸಮೂಹವಾಗಿದೆ. ಇದು ಕುಜ ಮತ್ತು ಗುರು ಗ್ರಹದ ನಡುವೆಯ ಮೊದಲ ಕಕ್ಷೆಯಲ್ಲಿ 2025ರಲ್ಲಿ ಕಾಣಿಸಲಿದೆ. 2027 ಮತ್ತು 2033ರಲ್ಲಿ ಏಳು ಕುಬ್ಜಗ್ರಹಗಳು ಗೋಚರಿಸಲಿವೆ. ಇದರಲ್ಲಿ ಗುರುಗ್ರಹದ ಕಡೆಗೆ ಐದು ಮತ್ತು ಅನಿಲ ತುಂಬಿದ ದೈತ್ಯಕಾಯದ ಕಡೆಗೆ ಎರಡು ಮುನ್ನುಗ್ಗಲಿವೆ. ಇದರಲ್ಲಿ ಅತ್ಯಂತ ದೊಡ್ಡ ಕುಬ್ಜಗ್ರಹದ ಗಾತ್ರ 95 ಕಿ.ಮೀ. ಸುತ್ತಳತೆಯನ್ನು ಹೊಂದಿದೆ. ಗುರುಗ್ರಹದ ಪ್ರತಿಯೊಂದು ಕ್ಷುದ್ರಗ್ರಹಗಳು ಸೌರಮಂಡಲದ ಹೊಸ ಕಥೆಯನ್ನು ಹೇಳುತ್ತದೆ ಎಂದು ವಿಜ್ಞಾನಿ ಥಾಮಸ್ ಜುರ್ಬುಚೆನ್ ಹೇಳಿದ್ದಾರೆ.
“ಲೂಸಿ” ನೌಕೆಯು ಈ ಕುಬ್ಜಗ್ರಹಗಳ ಮೇಲ್ಮೈನಿಂದ 400 ಕಿ.ಮೀ. ಅಂತರದಲ್ಲಿ ಹಾದು ಹೋಗಲಿದೆ. ತನ್ನಲ್ಲಿರುವ ಸಾಧನಗಳ ಮೂಲಕ ಕುಬ್ಜಗ್ರಹದಲ್ಲಿನ ದ್ರವ್ಯರಾಶಿ, ಸಂರಚನೆ, ಸಾಂದ್ರತೆ, ಪರಿಮಾಣ ಸೇರಿದಂತೆ ಅದರ ಭೂವಿಜ್ಞಾನವನ್ನು ಅಧ್ಯಯನ ಮಾಡಲಿದೆ.
ಟ್ರೋಜನ್ ಏಳು ಸಾವಿರ ಕುಬ್ಜಗ್ರಹಗಳನ್ನು ಹೊಂದಿದೆ ಎಂದು ಭಾವಿಸಲಾಗಿದೆ. ಇವು ಸೌರವ್ಯೂಹದ ದೊಡ್ಡ ಗ್ರಹಗಳಾದ ಗುರು, ಶನಿ, ಯುರೇನಸ್, ನೆಪ್ಚೂನ್ ಗಳ ರಚನೆಯಿಂದ ಅಳಿದುಳಿದ ಕಚ್ಚಾ ವಸ್ತುಗಳಿಂದ ಉಂಟಾಗಿವೆ ಎನ್ನಲಾಗಿದೆ.
NASA To Launch Mission To Probe Jupiter Asteroids
ಇದನ್ನು ಓದಿ: ಮಂಗಳ ಗ್ರಹದ ಅಂಗಳದಿ ಜಲದ ಸುಳಿವು
ಇದನ್ನು ಓದಿ: ಇಂದು ನಸುಕಿನಲ್ಲೇ ಉಪಗ್ರಹ ಉಡಾವಣೆ
Discussion about this post