ಚಿಕ್ಕಮಗಳೂರು: ಸಮಾಜ ಸೇವಕಿ ಹಾಗೂ ಕೊಡುಗೈ ದಾನಿ ಗೌರಮ್ಮ ಬಸವೇಗೌಡರವರ ನಿಧನಕ್ಕೆ ಶ್ರೀ ಮಾತ ಮಹಿಳಾ ಮಂಡಳಿ ಮೌನಚರಣೆ ಮೂಲಕ ತೀವ್ರ ಸಂತಾಪ ಸೂಚಿಸಿದೆ.
ಬಸವನಹಳ್ಳಿಯ ಬಸವೇಶ್ವರ ಉದ್ಯಾನವನದಲ್ಲಿ ಗೌರಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿ ಮಾತ ಮಂಡಳಿ ಸಂಸ್ಥಾಪಕ ಅಧ್ಯಕ್ಷೆ ಚಂದ್ರಾವತಿ ಶಂಕರ್ ಮಾತನಾಡಿ ಧಾನ, ಧರ್ಮ, ಕರುಣೆ, ಅನುಕಂಪ ಹಾಗೂ ಮಾನವೀಯತೆಯ ಕರುಣಾಮೂರ್ತಿಯಂತಿದ್ದ ಹಿರಿಯ ಜೀವ ಗೌರಮ್ಮನವರು ತಮ್ಮ ಬದುಕಿನುದ್ದಕ್ಕೂ ಅನುಸರಿಸಿದ ಉನ್ನತ ಮೌಲ್ಯಗಳು ಇಂದಿನ ಹಾಗೂ ಮುಂದಿನ ತಲೆಮಾರಿಗೆ ಆದರ್ಶ ಪ್ರಾಯವಾಗಿದೆ ಎಂದು ಸ್ಮರಿಸಿದರು.
ಗೌರಮ್ಮ ಬಸವೇಗೌಡರು ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತರಾದವರಲ್ಲ ಅವರು ಸಾರ್ವತ್ರಿಕವಾಗಿ, ಸಮಾಜಮುಖಿಯಾಗಿ ಕೆಲಸ ಮಾಡಿದ ಮಹಿಳೆ. ಅವರು ಮಾಡಿದಂತಹ ಕೆಲಸಗಳು ಪ್ರತಿಯೊಂದು ಜಾತಿಗೂ ತಲುಪಿದೆ. ಅವರ ಕುಟುಂಬವು ಈ ಜಿಲ್ಲೆಗೆ ಸಾಕಷ್ಟು ಉತ್ತಮ ಸೇವೆಯನ್ನು ಮಾಡಿದೆ. ಅವರ ಆದರ್ಶ, ತತ್ವಗಳು ಮತ್ತು ಸಿದ್ಧಾಂತಗಳು ನಮ್ಮ ಮುಂದೆ ಉಳಿದಿವೆ ಎಂದರು.
ಕೊಡುಗೈ ದಾನಿ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಅವರ ಅಗಲಿಕೆ ಅಪಾರ ನೋವು ತಂದಿದೆ. ಮಲ್ಲೇಗೌಡ ಆಸ್ಪತೆಗೆ ತಮ್ಮ ಸ್ವಂತ ಖರ್ಚಿನಿಂದ ಸುಮಾರು ೨೦ ಹಾಸಿಗೆಯುಳ್ಳ ಮಹಿಳಾ ವಾರ್ಡ್ಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಅನೇಕ ಸಮಾಜಮುಖಿಯಾಗಿ ಕೆಲಸ ಮಾಡಿದ ಧೀಮಂತರು. ಅರಳಗುಪ್ಪೆ ಕುಟುಂಬವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಗೌರಮ್ಮ ಬಸವೇಗೌಡರು ಸಮಾಜಸೇವೆಯ ಜತೆಗೆ ವೈಚಾರಿಕವಾಗಿ ಒಂದಿಷ್ಟು ಅಭಿರುಚಿ ಹೊಂದಿದ್ದರು. ಆ ಮುಖೇನ ಎಲ್ಲಾ ವರ್ಗದ ಜನರನ್ನು ಪ್ರೀತಿಸುತ್ತಿದ್ದರು. ಶಿಸ್ತು ಪಾಲನೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದರು ಎಂದರು.
ಸದಾ ಒಳಿತನ್ನೇ ಬಯಸುತ್ತಿದ್ದ ಗೌರಮ್ಮನವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತ ಮಹಿಳಾ ಮಂಡಳಿ ಅಧ್ಯಕ್ಷೆ ರಮಾರಾಜು, ಕಾರ್ಯದರ್ಶಿ ಅನ್ನಪೂರ್ಣಗೋಪಾಲ್, ಖಜಾಂಚಿ ಪ್ರೇಮಾಈಶ್ವರಪ್ಪ, ಸದಸ್ಯರಾದ ಸರೋಜಮ್ಮ, ಆಶಾ, ಲತಾ, ಶೈಲಜಾ, ತನುಜಾ, ಶಾರದಮ್ಮ, ರುದ್ರೇಗೌಡ ಸೇರಿದಂತೆ ಮತ್ತಿತರರು ಇದ್ದರು.

























Discussion about this post