ವಿಶ್ವದ ಕನಿಷ್ಠ 100 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯರ ಪಟ್ಟಿಯಲ್ಲಿ ಏಷ್ಯಾದ ಅತ್ಯಂತ ಸಿರಿವಂತ ಉದ್ಯಮಿಯಾದ ಮುಕೇಶ್ ಅಂಬಾನಿಯನ್ನು ಬ್ಲೂಮ್ರ್ಬಗ್ ಬಲಿಯನೇರ್ಸ್ ಸೂಚ್ಯಂಕ ಗುರುತಿಸಿದೆ.
ನವದೆಹಲಿ: ಎರಡು ದಿನಗಳ ಹಿಂದೆ ಫೋರ್ಬ್ಸ್ ಮ್ಯಾಗಜೀನ್ನ ಭಾರತ ನೂರು ಮಂದಿ ಶ್ರೀಮಂತರ ಪಟ್ಟಿಯಲ್ಲಿ ಸತತ 14ನೇ ವರ್ಷವೂ ಮೊದಲ ಸ್ಥಾನವನ್ನು ಉಳಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಕೇಶ್ ಅಂಬಾನಿ ಈಗ ಜಾಗತಿಕ ಮಟ್ಟದ ಕೋಟ್ಯಧಿಶರ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದ್ದಾರೆ. ವಿಶ್ವದ ಕನಿಷ್ಠ 100 ಬಿಲಿಯನ್ ಡಾಲರ್ (7.51 ಲಕ್ಷ ಕೋಟಿ ರೂಪಾಯಿ) ಸಂಪತ್ತಿನ ಒಡೆಯರ ಪಟ್ಟಿಯಲ್ಲಿ ಏಷ್ಯಾದ ಅತ್ಯಂತ ಸಿರಿವಂತ ಉದ್ಯಮಿಯಾದ ಮುಕೇಶ್ ಅವರನ್ನು ಬ್ಲೂಮ್ರ್ಬಗ್ ಬಲಿಯನೇರ್ಸ್ ಸೂಚ್ಯಂಕ ಗುರುತಿಸಿದೆ.
ಈ ವರ್ಷ ಮುಕೇಶ್ ಅವರ ಆಸ್ತಿ ಮೌಲ್ಯ 23.80 ಬಿಲಿಯನ್ ಡಾಲರ್ (1,78,813 ಕೋಟಿ ರೂಪಾಯಿ) ವೃದ್ಧಿಸಿದ್ದು, ಈ ಮೂಲಕ ಅವರ ಒಟ್ಟು ಆಸ್ತಿ 100.60 ಬಿಲಿಯನ್ ಡಾಲರ್ಗೆ (7,55,823 ಕೋಟಿ ರೂಪಾಯಿ) ಏರಿಕೆ ಕಂಡಿದೆ.
ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಆಸ್ತಿ ಮೌಲ್ಯ ಈ ವರ್ಷ 39.50 ಬಿಲಿಯನ್ ಡಾಲರ್ (2,96.769 ಕೋಟಿ ರೂಪಾಯಿ) ಹೆಚ್ಚಳವಾಗಿದ್ದು, ಅಜೀಂ ಪ್ರೇಮ್ಜಿ ಆಸ್ತಿ 12.80 ಬಿಲಿಯನ್ ಡಾಲರ್ (96,168 ಕೋಟಿ ರೂಪಾಯಿ) ಏರಿಕೆ ಆಗಿದೆ.
ಮುಕೇಶ್ ಅವರಿಗೆ ರಿಟೇಲ್ ಮತ್ತು ತಂತ್ರಜ್ಞಾನ ಸಂಸ್ಥೆಗಳು ಕಳೆದ ವರ್ಷ 27 ಬಿಲಿಯನ್ ಡಾಲರ್ (2.02 ಲಕ್ಷ ಕೋಟಿ ರೂ.) ಲಾಭ ತಂದುಕೊಟ್ಟಿವೆ. ಅವರ ಅಧ್ಯಕ್ಷತೆಯ ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದಲ್ಲಿ ತೈಲ ಸಂಸ್ಕರಣೆ, ಪೆಟ್ರೋ ಕೆಮಿಕಲ್ಸ್, ಸೌರ ವಿದ್ಯುತ್, ರಿಟೇಲ್, ತಂತ್ರಜ್ಞಾನ, ಇ-ಕಾಮರ್ಸ್, ದೂರ ಸಂಪರ್ಕ ಇನ್ನಿತರ ಉದ್ಯಮಗಳು ಮುನ್ನಡೆಸುತ್ತಿವೆ. ನವೀಕರಿಸಬಹುದಾದ ಶಕ್ತಿ ಮೂಲಗಳು ಕ್ಷೇತ್ರದಲ್ಲಿ ಮುಂದಿನ ಮೂರು ವರ್ಷದಲ್ಲಿ 10 ಬಿಲಿಯನ್ ಡಾಲರ್ (75,000 ರೂ.) ಹೂಡಿಕೆ ಮಾಡಿ ಅಗ್ಗದ ದರದಲ್ಲಿ ಜಲಜನಕ ಉತ್ಪಾದನೆ ಮಾಡುವುದಾಗಿ ಮುಕೇಶ್ ಕಳೆದ ತಿಂಗಳು ಘೋಷಿಸಿದ್ದಾರೆ.
ಧೀರೂಭಾಯಿ ಅಂಬಾನಿ 1960ರಲ್ಲಿ ರಿಲಯನ್ಸ್ ಸಂಸ್ಥೆಯನ್ನು ಸ್ಥಾಪಿಸಿ ವಿವಿಧ ಉದ್ಯಮಗಳನ್ನು ಕಟ್ಟಿ ಬೆಳೆಸಿದರು. ಧೀರೂಭಾಯಿ ನಿಧನ (2002) ನಂತರ ಅವರ ಮಕ್ಕಳ ನಡುವೆ ಆಸ್ತಿ ಹಂಚಿಕೆ ವ್ಯಾಜ್ಯ ನಡೆದು ತಾಯಿ ಕೋಕಿಲಾಬೆನ್ ಮಧ್ಯಸ್ಥಿಕೆಯಲ್ಲಿ (2005) ತಂದೆಯವರ ಉದ್ಯಮವನ್ನು ಹಂಚಿಕೊಂಡರು. ಹಿರಿಯ ಮಗ ಮುಕೇಶ್, ತೈಲ ಸಂಸ್ಕರಣೆ, ಪೆಟ್ರೋಕೆಮಿಕಲ್ಸ್ ಪಡೆದುಕೊಂಡರೆ, ಕಿರಿಯ ಮಗ ಅನಿಲ್, ವಿದ್ಯುತ್, ಹಣಕಾಸು ಸೇವೆ ಮತ್ತು ದೂರಸಂಪರ್ಕ ಕಂಪನಿಗಳನ್ನು ವಹಿಸಿಕೊಂಡರು. ನಂತರ ಮುಕೇಶ್ ಬೇರೆ ಬೇರೆ ಕ್ಷೇತ್ರಗಳಲ್ಲಿ ಉದ್ಯಮವನ್ನು ವಿಸ್ತರಿಸಿದರು. ಆದರೆ, ಅನಿಲ್ ಹಿನ್ನಡೆಯನ್ನು ಅನುಭವಿಸುತ್ತಿದ್ದು; ಕಳೆದ ವರ್ಷ ಲಂಡನ್ ಕೋರ್ಟ್ನಲ್ಲಿ ದಿವಾಳಿತನವನ್ನು ಘೋಷಿಸಿಕೊಂಡಿದ್ದಾರೆ.
Discussion about this post