ಚಿಕ್ಕಮಗಳೂರು: ೨೦೨೨ ರ ಶಾಲಾ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಜೂನ್ ಅಂತ್ಯದೊಳಗೆ ಕೇಂದ್ರಿಯ ವಿದ್ಯಾಲಯ ಕಾಮಗಾರಿಯನ್ನು ಪರಿಪೂರ್ಣ ಗುಣಮಟ್ಟದೊಂದಿಗೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕೇಂದ್ರ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚಿಸಿದರು.
ಅವರು ನಗರದ ಕದ್ರಿಮಿದ್ರಿ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಕೇಂದ್ರಿಯ ವಿದ್ಯಾಲಯದ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾತನಾಡಿ ಜಿಲ್ಲೆಯಲ್ಲಿ ಕೇಂದ್ರಿಯ ವಿದ್ಯಾಲಯ ಆರಂಭವಾಗಬೇಕು ಎಂಬುದು ದಶಕಗಳ ಕನಸು. ಅದರಂತೆ ಜಿಲ್ಲೆಗೆ ವಿದ್ಯಾಲಯ ಮಂಜೂರಾಗಿ ತಾತ್ಕಾಲಿಕ ಕಟ್ಟಡದಲ್ಲಿ ಶಾಲೆಗಳು ಆರಂಭವಾಗಿವೆ. ಪೂರ್ಣ ಪ್ರಮಾಣದಲ್ಲಿ ಸ್ವಂತ ಕಟ್ಟಡದಲ್ಲಿಯೇ ಶಾಲೆ ಆರಂಭಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕಳೆದ ಬಜೆಟ್ನಲ್ಲಿ ಜಿಲ್ಲೆಯಲ್ಲಿ ಕೇಂದ್ರಿಯ ವಿದ್ಯಾಲಯ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸಿದ್ದು ಇದೀಗ ಕಾಮಗಾರಿ ಆರಂಭಗೊಂಡಿದೆ ಎಂದು ಮಾಹಿತಿ ನೀಡಿದರು.
ಕೇಂದ್ರಿಯ ವಿದ್ಯಾಲಯವು ಸುಮಾರು ೧೦ ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿದ್ದು ಬೋಧನಾ ಕೊಠಡಿ, ಆಟದ ಮೈದಾನ, ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರಲಿದೆ. ಮುಂದಿನ ೨೦೨೨ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಜೂನ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಭಾಗದಲ್ಲಿ ಕೇಂದ್ರಿಯ ವಿದ್ಯಾಲಯ ಸುತ್ತಮುತ್ತಲಿನ ವಾತಾವರಣ ಪ್ರಶಾಂತತೆಯಿಂದ ಕೂಡಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ, ಇಳಿಜಾರು ಇರುವ ಕಾರಣ ಇಲ್ಲಿನ ಜಾಗವನ್ನು ಸಮತಟ್ಟುಗೊಳಿಸಿ ಸಮರ್ಪಕವಾಗಿ ಕಟ್ಟಡ ನಿರ್ಮಾಣ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ, ನಗರ ಮಂಡಲ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ದಿನೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























Discussion about this post