ಚಿಕ್ಕಮಗಳೂರು: ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದು ಇದನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಶಿಕ್ಷಕರ ಪಾತ್ರ ಬಲು ದೊಡ್ಡದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಅವರು ಇಂದು ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಬಾರ್ಡ್ ಯೋಜನೆ ಅಡಿ ನಿರ್ಮಾಣವಾಗಿರುವ ಕಟ್ಟಡ ಕಾಮಗಾರಿ ಉದ್ಘಾಟನೆ ಹಾಗೂ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ವರಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಶಿಕ್ಷಣ ಪದ್ದತಿಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಇದನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಶಿಕ್ಷಕರ ಪಾತ್ರ ದೊಡ್ಡದು. ಹೊಸ ಪಠ್ಯಕ್ರಮ ವಿಧಾನಕ್ಕೆ ಮಾನಸಿಕವಾಗಿ ಹೊಂದಿಕೊಳ್ಳುವ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತೆ ತಿಳಿಸಿದರು.
ಸರ್ವ ಶಿಕ್ಷಣ ಅಭಿಯಾನದ ಮೂಲಕ ೨೦೦೧ ರಿಂದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಕೊಠಡಿ ನಿರ್ಮಾಣ, ಶಿಕ್ಷಕರ ನೇಮಕಾತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗಿದೆ. ಹಿಂದಿನ ಶಿಕ್ಷಣ ಪದ್ದತಿಯ ಲೋಪದೋಷಗಳನ್ನು ಸರಿಪಡಿಸುವ ಮೂಲಕ ಸಮಾಜಮುಖಿಯಾಗಿ, ಮೌಲ್ಯದೊಂದಿಗೆ, ಕೌಶಲ್ಯಯುತ ಜತೆಗೆ ರಾಷ್ಟ್ರಪ್ರೇಮವನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಹೊಸ ಶಿಕ್ಷಣ ನೀತಿ ಸಹಕಾರಿಯಾಗಲಿದೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ದೇಶದಲ್ಲಿ ಉತ್ತಮ ನಾಗರೀಕರನ್ನು ನಿರ್ಮಾಣ ಮಾಡುವುದು ಶಿಕ್ಷಣದ ಮಾಣದಂಡವಾಗಬೇಕು. ಕಳೆದ ೭೫ ವರ್ಷಗಳಿಂದ ನಿರೀಕ್ಷಿತ ಶಿಕ್ಷಣವನ್ನು ಸಾಕಾರಗೊಳಿಸುವಲ್ಲಿ ವಿಫಲವಾಗಿದ್ದೇವೆ ಎಂಬ ಮನೋಧೋರಣೆ ನಮ್ಮೆಲ್ಲರನ್ನು ಕಾಡುತ್ತಿದೆ. ಅದಕ್ಕೆ ಪರಿಹಾರವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೊಸ ಪೀಳಿಗೆ ಭವಿಷ್ಯಕ್ಕೆ ಕಾರಣವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಬಹುತೇಕ ವಿದ್ಯಾವಂತರೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ವಿಷಾಧನೀಯ ಸಂಗತಿ. ಶಾಂತಿ, ಸುವ್ಯವಸ್ಥೆ ಕಾಪಾಡುವ ಮೂಲಕ ಶಿಕ್ಷಣವಂತರ ಸಂಖ್ಯೆಯನ್ನು ಹೆಚ್ಚಳ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಸಂಸ್ಕಾರ, ಮಾನವೀಯತೆ ಜೊತೆಗೆ ವ್ಯಕ್ತಿತ್ವ ನಿರ್ಮಿಸುವ ಕಾರ್ಖಾನೆಗಳಾಗಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ ಇದು ಕೇವಲ ಭಾಷಣದಿಂದ ಮಾತ್ರ ಸಾಧ್ಯವಿಲ್ಲ ಬದಲಾಗಿ ಶಿಕ್ಷಕರಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಶಕ್ತಿ ಅಡಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನೇ ದೇಶದ ಆಸ್ತಿಯನ್ನಾಗಿಸಬೇಕು. ದೇಶವನ್ನು ಕಟ್ಟುವಲ್ಲಿ ಯುವಜನತೆ ಪಾತ್ರ ಅತ್ಯಂತ ಮಹತ್ವದಾಗಿದೆ. ಉತ್ತಮ ವ್ಯಕ್ತಿತ್ವ ರೂಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಆರಂಭಿಸಬೇಕಿದೆ ಎಂದು ತಿಳಿಸಿದರು.
ಕೋವಿಡ್ ಕಾರಣದಿಂದಾಗಿ ಕಳೆದ ೨ ವರ್ಷಗಳಿಂದ ಶಾಲಾ-ಕಾಲೇಜುಗಳು ತೆರೆದಿಲ್ಲ ಇದರಿಂದಾಗಿ ವಿದ್ಯಾಭ್ಯಾಸ ಕುಂಠಿತಕ್ಕೆ ಕಾರಣವಾಗಿರಬಹುದು ಅದೆಲ್ಲವನ್ನು ಮೆಟ್ಟಿನಿಂತು ಉತ್ತಮ ಅಧ್ಯಯನ ಮಾಡುವ ಮೂಲಕ ಕೀರ್ತಿಗಳಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ಶಿಕ್ಷಣ ಎಂಬುದು ನಿಂತ ನೀರಲ್ಲ ಬದಲಾಗಿ ಅದೊಂದು ನಿರಂತರ ಕಲಿಕೆ. ದೇಶದಲ್ಲಿ ಉತ್ತಮ ಸತ್ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಣ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದು ಆ ನಿಟ್ಟಿನಲ್ಲಿ ಶೈಕ್ಷಣಿಕ ಬದಲಾವಣೆಗೆ ಅಗತ್ಯವಿದೆ. ಮೌಲ್ಯಯುತ ಶಿಕ್ಷಣದೊಂದಿಗೆ ಸ್ವಾವಲಂಬಿ ಬದುಕಿಗೆ ಶಿಕ್ಷಣ ದಾರಿ ದೀಪವಾಗಬೇಕಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಸಿ.ಟಿ.ರವಿ ಮಾತನಾಡಿ ಶಿಕ್ಷಣ ಎಂಬುದು ವ್ಯಾಪಾರವಾಗದೆ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಬೆಳವಣಿಗೆ ಪೂರಕವಾಗಿರಬೇಕು. ಆಧುನಿಕ ವಿಜ್ಞಾನ, ತಂತ್ರಜ್ಞಾನ ಬದಲಾದಂತೆ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿದ್ದ ಸತ್ಯ, ಮಾನವೀಯ ಮೌಲ್ಯ ಸಂಬಂಧಗಳು ಮರೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮನುಷ್ಯನ ಅಭ್ಯುದಯಕ್ಕೆ ಪೂರಕವಾಗಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ ಆ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಲಿದೆ. ಅಸ್ಪೃಷ್ಯತೆ, ಭ್ರಷ್ಟಾಚಾರ ತೊಲಗಿಸುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಿಸಿದರು.
ನಬಾರ್ಡ್ ಯೋಜನೆ ಅಡಿಯಲ್ಲಿ ೯೩ ಲಕ್ಷ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಉದ್ಘಾಟನೆ ಹಾಗೂ ರೂ೨ ಕೋಟಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡದ ಶಂಕುಸ್ಥಾಪನೆ ಮಾಡಲಾಗಿದ್ದು ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು. ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ, ನಗರಾಭೀವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಡಯಟ್ನ ಉಪನಿರ್ದೇಶಕಿ ಪುಷ್ಪಲತಾ, ಬಿಇಒ ಮಂಜುನಾಥ್, ಕಾಲೇಜು ಅಭಿವೃದ್ದಿ ಮಂಡಳಿ ಅಧ್ಯಕ್ಷ ವೆಂಕಟೇಶ್ಪೈ, ಎಪಿಎಂಸಿ ಅಧ್ಯಕ್ಷ ರಾಜೀವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























Discussion about this post