ಚನ್ನೈ: ಈಗಾಗಲೇ ತಮಿಳುನಾಡಿನಲ್ಲಿ ಜನಪರ ಆಡಳಿತದ ಮೂಲಕ ಮನೆಮಾತಾಗಿರುವ ತಮಿಳುನಾಡು ಮುಖ್ಯಮಂತ್ರಿ ಈಗ ಉನ್ನತ ಶಿಕ್ಷಣಲ್ಲಿ ಸುಧಾರಣೆ ತರಲು ಯತ್ನಿಸಿದ್ದಾರೆ. ಎಂಕೆ ಸ್ಟಾಲಿನ್ 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನೀಟ್ ವಿರುದ್ಧದ ಹೋರಾಟಕ್ಕೆ ಬೆಂಬಲವನ್ನು ಕೋರಿದ್ದಾರೆ.
ಮುಖ್ಯಮಂತ್ರಿ ಅವರು ತಮ್ಮ ಪತ್ರವನ್ನು ಹೆಚ್ಚಾಗಿ ವಿರೋಧ ಪಕ್ಷಗಳು ಆಳುವ ರಾಜ್ಯಗಳಿಗೆ ಬರೆದಿದ್ದಾರೆ.
ಸ್ಟಾಲಿನ್ ಅವರು, ಆಂಧ್ರಪ್ರದೇಶ, ಛತ್ತೀಸ್ಗಡ, ದೆಹಲಿ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಮನವಿ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದವರು ಮತ್ತು ಸಮಾಜದ ಅಂಚಿನಲ್ಲಿರುವ ವರ್ಗದವರು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಕಷ್ಟ ಪಡಬಾರದು. ನಮ್ಮ ಸಂವಿಧಾನದಲ್ಲಿ ಕಲ್ಪಿಸಲಾಗಿರುವಂತೆ ಶಿಕ್ಷಣ ಕ್ಷೇತ್ರವನ್ನು ನಿರ್ವಹಿಸುವಲ್ಲಿ, ರಾಜ್ಯ ಸರ್ಕಾರಗಳ ಪ್ರಾಮುಖ್ಯತೆಯನ್ನು ಪುನಃಸ್ಥಾಪಿಸಲು ನಾವು ಒಗ್ಗಟ್ಟಿನ ಪ್ರಯತ್ನವನ್ನು ಮಾಡಬೇಕಾಗಿದೆ” ಎಂದು ಅವರು ಬರೆದಿದ್ದಾರೆ.
ನೀಟ್ ಅನ್ನು ಪರಿಚಯಿಸುವ ಒಕ್ಕೂಟ ಸರ್ಕಾರದ ಕ್ರಮವು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ರಾಜ್ಯಗಳು ಸ್ಥಾಪಿಸಿರುವ ಮತ್ತು ನಡೆಸುತ್ತಿರುವ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶದ ವಿಧಾನವನ್ನು ನಿರ್ಧರಿಸುವ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ನಿರ್ಬಂಧಿಸುವುದು, ಸಾಂವಿಧಾನಿಕ ಅಧಿಕಾರದ ಸಮತೋಲನವನ್ನು ಉಲ್ಲಂಘಿಸುತ್ತದೆ ಎಂಬುದು ನಮ್ಮ ನಿಲುವು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಮೇಲೆ ಪ್ರತಿಕೂಲ ಪರಿಣಾಮ ಬೀರಿದ ನೀಟ್:
ನೀಟ್ ಆಧಾರಿತ ಪ್ರವೇಶ ಪ್ರಕ್ರಿಯೆಯು, ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆಯೇ ಎಂದು ತಮಿಳುನಾಡು ಸರ್ಕಾರ ಅಧ್ಯಯನ ನಡೆಸಿತ್ತು.
ಈ ಅಧ್ಯಯನಕ್ಕೆ, ತಮಿಳುನಾಡು ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎಕೆ ರಾಜನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಿತ್ತು. ಸದರಿ ಸಮಿತಿಯ ವರದಿಯನ್ನು ಸ್ಟಾಲಿನ್ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಲಗತ್ತಿಸಿದ್ದಾರೆ.

























Discussion about this post