ಚಿಕ್ಕಮಗಳೂರು:- ಸುಪ್ರೀಂ ಕೋರ್ಟ್ನ ಸೂಚನೆಗಳನ್ನು ಸರಿಯಾಗಿ ಪಾಲಿಸದ ಮೈಸೂರು ಜಿಲ್ಲಾಡಳಿತವು ಕೇವಲ ಹಿಂದೂ ಸಮಾಜಕ್ಕೆ ಸೇರಿದ ಪುರಾತನ ದೇವಸ್ಥಾನಗಳನ್ನು ತೆರವುಗೊಳಿಸಿರುವುದನ್ನು ವಿಶ್ವಹಿಂದೂ ಪರಿಷತ್-ಬಜರಂಗದಳ ಸಂಘಟನೆಗಳು ಖಂಡಿಸಿವೆ.
ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆ ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿಯೊಂದು ದೇವಸ್ಥಾನಗಳಿಗೂ ಪ್ರತ್ಯೇಕ ನೋಟೀಸ್ ಜಾರಿ ಮಾಡಿ ಸ್ಥಳಾಂತರಿಸಲು ಬೇಕಾದ ಕ್ರಮಗಳನ್ನು ಜರುಗಿಸಿ, ದೇವಸ್ಥಾನಗಳನ್ನು ಉಳಿಸಿ, ರಕ್ಷಣೆ ಮಾಡುಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಪ್ರತಿಯೊಂದು ಪ್ರಕರಣದಲ್ಲೂ ಜಿಲ್ಲಾಡಳಿತ ದೇವಸ್ಥಾನಗಳ ಆಡಳಿತ ಮಂಡಳಿ ಜೊತೆ ಚರ್ಚಿಸಿ, ಆ ದೇವಸ್ಥಾನದ ಇತಿಹಾಸ, ಅದು ಇರುವ ಜಾಗದಲ್ಲಿ ಇತ್ತೀಚೆಗೆ ರಸ್ತೆ ನಿರ್ಮಾಣವಾಗಿರುವ ಬಗ್ಗೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದ್ದರೂ ಮೈಸೂರು ಜಿಲ್ಲಾಡಳಿತ ಅವೈಜ್ಞಾನಿಕವಾಗಿ ದೇವಸ್ಥಾನ ಕೆಡವಿರುವುದು ಖಂಡನೀಯ ಎಂದು ತಿಳಿಸಲಾಗಿದೆ.
ಕೇವಲ ಹಿಂದೂ ಸಮಾಜದ ದೇವಸ್ಥಾನಗಳನ್ನು ಹೊತ್ತುಗೊತ್ತು ಇಲ್ಲದ ವೇಳೆಯಲ್ಲಿ ತೊಘಲಕ್ ನೀತಿಯಂತೆ ತೆರವುಗೊಳಿಸಿರುವುದು ಹಿಂದೂ ಸಮಾಜದ ಭಾವನೆಗೆ ಅತೀವ ನೋವುಂಟುಮಾಡಿದೆ ಎಂದು ಆಕ್ರೋಷ ವ್ಯಕ್ತಪಡಿಸಲಾಗಿದೆ.
ಕೋರ್ಟ್ ಆದೇಶ ಪಾಲಿಸುವಾಗ ರಾಜ್ಯ ಸರ್ಕಾರವು ಪ್ರತಿಯೊಂದು ಶ್ರದ್ಧಾಕೇಂದ್ರದ ಬಗ್ಗೆ ಪ್ರತ್ಯೇಕವಾಗಿ ವಿಮರ್ಷೆ ಮಾಡಿ ಸಕ್ರಮ, ಸ್ಥಳಾಂತರ ಅನಿವಾರ್ಯವಿದ್ದಾಗ ಮಾತ್ರ ತೆರವು ಮಾಡಲು ಕ್ರಮ ಜರುಗಿಸಬೇಕೆಂದು ತಿಳಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ದೇವಸ್ಥಾನವನ್ನು ಮಾತ್ರ ಕೆಡವಿರುವುದು ಖಂಡನೀಯ ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಜಿಲ್ಲಾ ಸಹಕಾರ್ಯದರ್ಶಿ ರಂಗನಾಥ್, ನಗರಾಧ್ಯಕ್ಷ ಸದಾಶಿವ, ಬಜರಂಗದಳ ನಗರ ಸಂಯೋಜಕ ಶ್ಯಾಮ್ ವಿ.ಗೌಡ, ಜಿಲ್ಲಾ ಸಹ ಸಂಯೋಜಕ್ ಅಮಿತ್ ಇದ್ದರು.

























Discussion about this post