ಚಿಕ್ಕಮಗಳೂರು: ದೇಶದಲ್ಲಿ ಭವಿಷ್ಯದ ಉತ್ತಮ ಪ್ರಜೆಗಳ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಕಡೂರು ವಿಧಾನ ಸಭಾ ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.
ಅವರು ಇಂದು ಕಡೂರಿನ ಲಕ್ಷಾ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮತ್ತು ತಾಲ್ಲೂಕು ಶಿಕ್ಷಕರ ದಿನಾಚರಣೆ ಆಚರಣೆ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಡೂರು ಮತ್ತು ಬೀರೂರು ಶೈಕ್ಷಣಿಕ ವಲಯ ಇವರ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ೬೦ನೇ ಜನ್ಮದಿನೋತ್ಸವದ ಪ್ರಯುಕ್ತ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ನಿಸ್ವಾರ್ಥತೆ, ಜಾತ್ಯತೀತ ಮನೋಭಾವನೆ ಬೆಳೆಸಬೇಕಾದ ಮಹತ್ತರ ಜವಾಬ್ದಾರಿ ಶಿಕ್ಷಕರದಾಗಿದ್ದು, ಭವಿಷ್ಯದ ಪೀಳಿಗೆಯ ನಾಗರಿಕರನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರುತ್ತಾರೆ, ನಾನು ಕೂಡ ಶಾಸಕನಾಗಿ ರಾಜಕೀಯಕ್ಕೆ ಬರಲು ಶಿಕ್ಷಕರೇ ಪ್ರೇರಣೆ ಎಂದ ಅವರು ಕ್ಷೇತ್ರದಲ್ಲಿ ಶಿಕ್ಷಕರ ಒಳಿತಿಗಾಗಿ ಹೆಚ್ಚು ಅನುದಾನ ಬಿಡುಗಡೆಗೊಳಿಸಲಾಗಿದೆ, ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ,ಎಸ್, ಯಡಿಯೂರಪ್ಪನವರ ಅವಧಿಯಲ್ಲಿ ಶಿಕ್ಷಕರ ಕ್ಷೇಮಾಭಿವೃದ್ಧಿಗೆ ಹೆಚ್ಚು ಅನುದಾನ ಬಿಡುಗಡೆಗೊಳಿಸಲಾಗಿದ್ದು, ರಾಜ್ಯದಲ್ಲಿ ಸರ್ಕಾರಿ ನೌಕರರ ಕುಟುಂಬಕ್ಕೆ ಉಚಿತ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಿದ್ದು, ಜೊತೆಗೆ ರೈತರ ಮಕ್ಕಳಿಗೆ ಶಿಕ್ಷಣ ವೇತನ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿ ಆರಂಭಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು. ಕಡೂರು ತಾಲೂಕಿನ ೧೧೯ ಕೆರೆಗಳಿಗೆ ಭದ್ರ ಉಪ ಕಣಿವೆ ಮೂಲಕ ನೀರು ಒದಗಿಸುವ ಕಾರ್ಯಕ್ಕೆ ಅನುಮೋದನೆ ದೊರೆತಿದ್ದು, ಇದೇ ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಕಾಮಗಾರಿಗೆ ಚಾಲನೆ ಕೊಡಿಸಲಾಗುವುದು, ಈ ಯೋಜನೆಯಿಂದಾಗಿ ಕಡೂರು ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಸುವುದಲ್ಲದೆ ಜನರಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು. ಮೆಡಿಕಲ್ ಕಾಲೇಜು ನಿರ್ಮಾಣ, ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ನೀರಾವರಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದ ಅವರು ಜಿಲ್ಲೆಯಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಎಸ್ ಸುರೇಶ್ ಮಾತನಾಡಿ ಶಿಕ್ಷಕರು ದೇಶದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಮೂಲತಹ ಶಿಕ್ಷಕರಾಗಿದ್ದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣೆಗಾಗಿ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದ್ದು ನಮ್ಮ ಬದುಕನ್ನು ರೂಪಿಸುವ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಲು ಇರುವ ಅತ್ಯಂತ ಮಹತ್ವದ ದಿನವಾಗಿದೆ ಎಂದು ತಿಳಿಸಿದರು.
ದೇಶದ ಭವಿಷ್ಯವು ಶಿಕ್ಷಕರ ಕೈಯಲ್ಲಿದ್ದು ಶಿಕ್ಷಕರು ಹೆಚ್ಚಿನ ಕಾಳಜಿಯಿಂದ ಮತ್ತು ತಾಳ್ಮೆಯಿಂದ ಮಕ್ಕಳಿಗೆ ಉತ್ತಮ ಬೋದನೆಯನ್ನು ನೀಡುವ ಮೂಲಕ ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದ ಅವರು ಶಿಕ್ಷಕ ವೃತ್ತಿ ಎಂಬುದು ಅತ್ಯಂತ ಕಠಿಣ ಮತ್ತು ಜವಾಬ್ದಾರಿಯುತ ವೃತ್ತಿಯಾಗಿದ್ದು ಎಲ್ಲರ ಬದುಕನ್ನು ಸಮರ್ಥವಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಶಾಸಕ ಎಸ್.ಎಲ್ ಬೋಜೇಗೌಡ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾದರೆ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿಯಾದಂತೆ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಪ್ರತಿ ವಿದ್ಯಾರ್ಥಿಯ ಏಳಿಗೆಯಲ್ಲಿ ಪ್ರಮುಖ ಪಾತ್ರ ಶಿಕ್ಷಕರಾದ್ದಗಿದ್ದು, ನಮ್ಮ ದೇಶದ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರ, ತಂತ್ರಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಂತಹ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಾಮಾಜಿಕ ಕಳಕಳಿ ಹೊಂದುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು.
ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಹಾಗೂ ಸರ್ಕಾರದ ಪಾತ್ರ ಬಹಳ ಮುಖ್ಯವಾಗಿದು, ಶಿಕ್ಷಣದ ಕ್ರಾಂತಿಯಾಗಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ, ಶೈಕ್ಷಣಿಕವಾಗಿ, ಸಮುದಾಯದ ಮುಖ್ಯವಾಹಿನಿಯಾಗಿ ಕಾರ್ಯನಿರ್ವಹಿಸುವಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದ್ದು, ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣದ ಜೊತೆಯಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಶಿಕ್ಷಣವನ್ನು ನೀಡುವ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಎಲ್ಲಾ ಸಾಧಕರಿಗೆ ಗುರುವಿನ ಆಶೀರ್ವಾದ, ಗುರುವಿನ ಆಸರೆ ಕಡ್ಡಾಯವಾಗಿ ಇದ್ದಾಗ ಮಾತ್ರ ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಉನ್ನತ ಮಟ್ಟ ತಲುಪಲು ಸಾಧ್ಯ ಎಂದು ಹೇಳಿದರು.
ಪ್ರಪಂಚದಲ್ಲಿ ಮನುಷ್ಯನ ಸಂಬಂಧ ಹಾಗೂ ಸಂಪರ್ಕಕ್ಕೆ ಒಳಪಡುವ ಎಲ್ಲರಿಂದಲೂ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಅನೇಕ ಅಂಶಗಳನ್ನು ಕಲಿಯುತ್ತಾನೆ ಆದರೆ ಅಷ್ಟು ಅಂಶಗಳನ್ನು ಒಳಗೊಂಡ ಏಕೈಕ ವ್ಯಕ್ತಿ ಗುರು ಮಾತ್ರ ಎಂದ ಅವರು ಎಲ್ಲ ಕ್ಷೇತ್ರದಲ್ಲೂ ಒಂದೊದು ರೀತಿಯ ಗುರುವಿನ ಆಶೀರ್ವಾದ ಅಗತ್ಯವಾಗಿದ್ದು, ಮಕ್ಕಳಿಗೆ ಶಿಷ್ಟ ಶಿಕ್ಷಣವು ಕೇವಲ ಪುಸ್ತಕದಿಂದ ಮಾತ್ರವಲ್ಲ ಬಾಹ್ಯ ಪ್ರಪಂಚದ ಜ್ಞಾನದ ಮೂಲಕ ಶಿಕ್ಷಣವನ್ನು ನೀಡಬೇಕು ಎಂದರು.
ಮಕ್ಕಳಿಗೆ ನಮ್ಮ ಸುತ್ತಮುತ್ತಲಿನ ಸಮುದಾಯದ ಪರಿಚಯ ಹಾಗೂ ವ್ಯವಹಾರದ ಗುಣಗಳನ್ನು ತಿಳಿಸುವ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸುವ ಕಾರ್ಯ ನಿರ್ವಹಿಸಬೇಕು ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿರುವ ಗ್ರಾಮ ಪಂಚಾಯತಿ ಕಛೇರಿ, ಗ್ರಂಥಾಲಯ, ಆಸ್ಪತ್ರೆ, ನಾಡಕಛೇರಿ ಮುಂತಾದ ಸಾರ್ವಜನಿಕ ಕಛೇರಿಗಳಲ್ಲಿನ ದಿನನಿತ್ಯದ ಚಟುವಟಿಕೆಗಳನ್ನು ಪರಿಚಯ ಮಾಡಿಕೊಡಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಪುಸ್ತಕ ಚಟುವಟಿಕೆಗಳೊಂದಿಗೆ ಬಾಹ್ಯ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡಬೇಕು, ಹೊರಗಿನ ಪ್ರಪಂಚದ ಶಿಕ್ಷಣವು ಅತ್ಯಂತ ಮಹತ್ವದ್ದಾಗಿದ್ದು, ಪುಸ್ತಕದ ಜೊತೆಯಲ್ಲಿ ಮಕ್ಕಳಿಗೆ ಹೊರಗಿನ ನಾಯಕತ್ವದ ಗುಣಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ವಿ ಮಲ್ಲೇಶಪ್ಪ ಮಾತನಾಡಿ, ಗುರುವಿನ ಸ್ಥಾನವನ್ನು ಭಾರತೀಯ ಸಂಸ್ಕೃತಿಯು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದು, ಕತ್ತಲಿನಿಂದ ಬೆಳಕಿನೆಡೆಗೆ ತೆಗೆದುಕೊಂಡು ಹೋಗುವವನೆ ಗುರು ಎಂದು ತಿಳಿಸಿದರು.
ಭಾರತ ದೇಶ ಕಂಡಂತಹ ಅತ್ಯಂತ ಶ್ರೇಷ್ಠ ದಾರ್ಶನಿಕ, ಶ್ರೇಷ್ಠ ತತ್ವಜ್ಞಾನಿ, ಉಪನ್ಯಾಸಕ, ಶಿಕ್ಷಕ ಡಾ. ಸರ್ವಪಲ್ಲಿ ರಾಧಕೃಷ್ಣನ್ ಅವರ ಸವಿನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದು, ಶಿಕ್ಷಕ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವಂತಹ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದರು.
ಕೋವಿಡ್-೧೯ ಸಾಂಕ್ರಾಮಿಕ ರೋಗದ ಸನ್ನಿವೇಶದಿಂದಾಗಿ ಭೌತಿಕವಾಗಿ ತರಗತಿಗಳು ಮಾಡುವ ಬದಲು ಮಾಧ್ಯಮಗಳ ಮೂಲಕ ಮಕ್ಕಳನ್ನು ತಲುಪಬೇಕಾಗಿದ್ದು, ಮಾಧ್ಯಮಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸುವ ಮೂಲಕ ಯಶಸ್ವಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಚಟ್ನಹಳ್ಳಿ ಮಹೇಶ್ ಅವರು ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಡಯಟ್ ಪ್ರಾಂಶುಪಾಲೆ ಹೆಚ್.ಕೆ ಪುಷ್ಪಲತಾ, ಕಡೂರು ತಹಸಿಲ್ದಾರ್ ಜೆ.ಉಮೇಶ್, ಕಡೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ದೇವರಾಜನಾಯ್ಕ, ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಂಗನಾಥಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























Discussion about this post