ಚಿಕ್ಕಮಗಳೂರು: ಮದರಸಾ ಒಂದು ಧಾರ್ಮಿಕ ಸಂಸ್ಥೆ, ಅಲ್ಲಿ ಧಾರ್ಮಿಕತೆಯ ಬಗ್ಗೆ ಶಿಕ್ಷಣ ನೀಡಲಾಗುತ್ತಿದೆ. ಮದರಸಾಗಳು ಶಿಕ್ಷಣ ಕಲಿಸುವ ಮೂಲಕ ಯುವಜನರನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಮಾಡುತ್ತಿವೆ. ಆದರೆ, ಸಿ.ಟಿ.ರವಿ ಅವರು ಮದರಸಾಗಳು ತಾಲಿಬಾನ್‌ಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿರುವುದನ್ನು ಪಕ್ಷ ಖಂಡಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿ ಮದರಸಾಗಳಲ್ಲಿ ತಾಲಿಬಾನ್‌ಗಳನ್ನು ಸೃಷ್ಟಿಸಲಾಗುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆಗೆ ಸ್ಪಷ್ಠನೆ ನೀಡಿ ತಾಲಿಬಾನ್ ಚಟುವಟಿಕೆಗಳನ್ನು ಕಾಂಗ್ರೆಸ್ ಪಕ್ಷ ಎಂದೂ ಬೆಂಬಲಿಸುವುದಿಲ್ಲ. ಜೊತೆಗೆ ದೇಶ ದ್ರೋಹದ ಕೆಲಸ ಮಾಡುವ ಸಂಸ್ಥೆ ಅಥವಾ ಜನರನ್ನು ಬೆಂಬಲಿಸುವುದಿಲ್ಲ. ಆದರೆ, ಧಾರ್ಮಿಕ ಸಂಸ್ಥೆಗಳ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ಎಂದೂ ಸಹಿಸುವುದಿಲ್ಲ. ಯಾವುದೇ ಧಾರ್ಮಿಕ ಸಂಸ್ಥೆಗಳಾಗಲಿ ಲಘುವಾಗಿ ಮಾತನಾಡುವುದು ಸರಿಯಲ್ಲ. ಅವರ ಹೇಳಿಕೆಗಳು ಅತ್ಯಂತ ಕೀಳು ಮಟ್ಟದಿಂದ ಕೂಡಿವೆಂದು ಹೇಳಿದ್ದಾರೆ.
ಜನರ ಸಮಸ್ಯೆಗಳ ಪರಿಹಾರ, ಬದುಕಿನ ವಿಚಾರ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಧ್ವನಿ ಎತ್ತದೆ ಕೇವಲ ಪ್ರಚಾರಕ್ಕಾಗಿ ಧಾರ್ಮಿಕ ವಿಚಾರಗಳಲ್ಲಿ ಭಾವನಾತ್ಮಕ ಹೇಳಿಕೆಗಳ ಮೂಲಕ ಪ್ರಚೋದನೆ ನೀಡುವುದನ್ನು ನಿಲ್ಲಿಸಿ ಎಂದರು.
ದೇಶದಲ್ಲಿ ನೋಟ್ ಬ್ಯಾನ್ ಆದ ನಂತರದಲ್ಲಿ ಸಣ್ಣಪುಟ್ಟ ಉದ್ಯಮ ಕ್ಷೇತ್ರಗಳು ನೆಲಕಚ್ಚಿವೆ. ಕೃಷಿ ಕ್ಷೇತ್ರದ ಚಟುವಟಿಕೆಗಳು ಕುಸಿದು ಬಿದ್ದಿರುವ ಪರಿಣಾಮ ಸ್ವಾಭಿಮಾನದಿಂದ ಬದುಕುತ್ತಿದ್ದ ರೈತರು, ವರ್ತಕರು ಕೈಚಾಚುವಂತ ಸ್ಥಿತಿಯನ್ನು ನಿಮ್ಮ ಸರ್ಕಾರಗಳು ತಂದೊಡ್ಡಿವೆ. ಈ ಸಮಸ್ಯೆಗಳ ಬಗ್ಗೆ ಎಂದಾದರೂ ಚಿಂತನೆ ನಡೆಸಿ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಗಳು ನಿತ್ಯ ಏರಿಕೆಯಾಗುತ್ತಿರುವ ಪರಿಣಾಮ ದೇಶದ ಜನರ ಬದುಕು ಕುಸಿದು ಪಾತಾಳ ತಲುಪಿದೆ. ಪ್ರತಿಯೊಂದು ದಿನಸಿ ಪದಾರ್ಥಗಳ ಬೆಲೆಗಳು ಆಕಾಶದೆತ್ತರಕ್ಕೆ ಚಿಮ್ಮಿವೆ. ಮನೆ ಸಾಲ, ವಿದ್ಯಾಭ್ಯಾಸದ ಸಾಲ, ಮನೆ ಬಾಡಿಗೆ, ಆಸ್ಪತ್ರೆ ವೆಚ್ಚಗಳನ್ನು ಬರಿಸಲಾಗದೆ ಸಾಮಾನ್ಯ ಜನರು ಹೈರಾಣಾಗಿದ್ದಾರೆ ಎಂದು ತಿಳಿಸಿದರು.

























Discussion about this post