ಮಾನವ ಧರ್ಮ ಮಂಟಪ ಕಡೇನಂದಿಹಳ್ಳಿ: ಜನಮನಗಳನ್ನು ತಲ್ಲಣಗೊಳಿಸುವ ರಾಕ್ಷಸೀ ಗುಣ ಸ್ವಭಾವಗಳು ಅಪೂರ್ವ ಮಾನವ ಸಂಪನ್ಮೂಲದ ನಾಶಕ್ಕೆ ಕಾರಣವಾಗುತ್ತವೆ. ಧರ್ಮ ಸಿದ್ಧಾಂತಗಳು ಉಗ್ಗಡಿಸುವ ಜೀವನ ಮೌಲ್ಯಗಳ ಸಂಸ್ಕಾರ ಪೂರ್ಣ ಹಸಿರು, ಹೃದ್ಯ ಜನಪರ ಭಾವೈಕ್ಯ ನಿಲುವುಗಳನ್ನು ಸ್ವೀಕರಿಸಿ ಬದುಕಿನ ನಾಶಕ್ಕೆ ಕಾರಣವಾಗುವ ಎಲ್ಲ ಪೈಶಾಚಿಕ ಕೃತ್ಯಗಳಿಂದ ಹೊರ ಬಂದಾಗಲೇ ಮನುಕುಲದ ವಿಕಾಸ ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶಯ ವ್ಯಕ್ತಪಡಿಸಿದರು.
ಅವರು ಕಡೇನಂದಿಹಳ್ಳಿ ಗ್ರಾಮದ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ವಿಜಯ ದಶಮಿಯಂದು ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಶಮೀ ಸೀಮೋಲಂಘನ ನೆರವೇರಿಸಿದ ನಂತರ ಮಾನವ ಧರ್ಮ ಮಂಟಪದಲ್ಲಿ ಸಿಂಹಾಸನಾರೋಹಣ ಮಾಡಿ ವಿಜಯ ದಶಮಿಯ ಶಾಂತಿ ಸಂದೇಶ ಅನುಗ್ರಹಿಸಿ ಆಶೀರ್ವಚನ ನೀಡುತ್ತಿದ್ದರು.
ಅಖಂಡ ಮನುಕುಲಕ್ಕೆ ಪ್ರಾಪ್ತವಾಗಿರುವ ಬದುಕಿನ ಅಪೂರ್ವ ಅವಕಾಶದ ಅರಿವು ಇಲ್ಲವಾಗುತ್ತಿದೆ. ಧನಾತ್ಮಕ ಯೋಚನೆಗಳಿಂದ ವಂಚಿತನಾಗುತ್ತಿರುವ ಮನುಷ್ಯ ಕೇವಲ ಋಣಾತ್ಮಕ ವಿಚಾರ ಮಗ್ನತೆಯಿಂದ ಒಟ್ಟು ಮನುಕುಲವೆ ವಿನಾಶದತ್ತ ಮುಖ ಮಾಡಿದೆ. ಅರ್ಥಪೂರ್ಣವಾಗಬೇಕಾದ ಬದುಕು ವ್ಯರ್ಥ ಪೂರ್ಣವಾಗುತ್ತಿರುವುದು ಅತ್ಯಂತ ಕಳವಳದ ಸಂಗತಿಯಾಗಿದೆ ಎಂದರು.
ಅಂತರ್ ಯಾತ್ರೆ ಅಗತ್ಯ: ಬದುಕು ನಮ್ಮೊಳಗೆ ಅರ್ಥವಾಗಲು ನಿತ್ಯವೂ ನಮಗೆ ಅಂತರ್ ಯಾತ್ರೆ ಅಗತ್ಯ. ಕೇವಲ ಇದು ಸನ್ಯಾಸದ ಜೀವನ ವಿಧಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಬಡವ-ಬಲ್ಲಿದ, ಸ್ತ್ರೀ-ಪುರುಷ, ಶಿಕ್ಷಿತ-ಅಶಿಕ್ಷಿತ ಯಾರೇ ಇರಲಿ ಎಲ್ಲರೂ ನಿತ್ಯದಲ್ಲಿ ನಡೆಸುವ ಅಂತರ್ ಯಾತ್ರೆಯ ಫಲಶೃತಿಯಲ್ಲಿ ಇನ್ನೊಬ್ಬರ ಬದುಕೂ ನಮ್ಮೊಳಗೆ ಅರ್ಥವಾಗುತ್ತದೆ. ಜಾತಿ, ವರ್ಗ, ವರ್ಣ ಭೇದಗಳ ದ್ವಂದ್ವ ಗೊಂದಲಗಳಿಂದ ಹೊರಬಂದು ಕೂಡಿ ಬಾಳುವ ಸ್ನೇಹದೀಕ್ಷೆ ಹೊಂದಲು ಎಲ್ಲರಿಗೂ ಸಾಧ್ಯವಾಗುತ್ತದೆ. ಶಾಂತಿ ಪೂರ್ಣ ಬದುಕಿಗೆ ಬೆಳಕು ಬೀರುವ ಭಾವೈಕ್ಯದ ಹಬ್ಬ ವಿಜಯ ದಶಮಿಯ ಸಿಹಿ ಕ್ಷಣಗಳು ಸರ್ವ ಸಮಾಜಗಳ ಜನಮನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತುಂಬಿ ತರಲಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಒಂಭತ್ತು ದಿನಗಳ ಕಾಲ ಶ್ರೀ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆದದ್ದು ತಮಗೆ ಸಮಾಧಾನ ತಂದಿದೆ ಎಂದರು.
ಲೋಕಸಭಾ ಸದಸ್ಯ ಹಾಗೂ ಸಮಾರಂಭದ ಕಾರ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ ಸರ್ವರನ್ನೂ ಸ್ವಾಗತಿಸಿ ಶ್ರೀ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ಧರ್ಮ ಸಮಾರಂಭ ಯಶಸ್ವಿಯಾಗಿ ನಡೆಯುವಲ್ಲಿ ಭಕ್ತ ಸಂಕುಲದ ಸಹಕಾರ ಮಹತ್ತರವಾದುದು ಎಂದು ಶ್ಲಾಘಿಸಿದರು.
ಕಡೇನಂದಿಹಳ್ಳಿ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳ ಪವಿತ್ರ ಸಾನ್ನಿಧ್ಯದಲ್ಲಿ ತಾವು ಕೈಕೊಂಡ ಸಂಕಲ್ಪದಿಂದಾಗಿ ಈ ಬೃಹತ್ ಸಮಾರಂಭ ಯಶಸ್ವಿಯಾಗಿ ನಡೆದಿದೆ. ಶರನ್ನವರಾತ್ರಿ ದಸರಾ ಧರ್ಮ ಸಮಾರಂಭ ಇಲ್ಲಿ ನಡೆದದ್ದು ಈ ಭಾಗದ ಜನತೆಯ ಪುಣ್ಯ ವಿಶೇಷವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರಿಗೆ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಶ್ರೀ ರಂಭಾಪುರಿ ಪೀಠದಿಂದ ಗುರುರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ದಸರಾ ಧರ್ಮ ಸಮಾರಂಭದ ಸಮಿತಿಯ ಪರವಾಗಿ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಕಾಣಿಕೆ-ಭಕ್ತಿಯ ಬಿನ್ನವತ್ತಳೆ ಸಮರ್ಪಿಸಲಾಯಿತು.
ವೇದಿಕೆಯಲ್ಲಿ ಮಳಲಿ, ಸಿದ್ಧರಬೆಟ್ಟ, ಸಂಗೊಳ್ಳಿ, ಹಾರನಹಳ್ಳಿ, ಚನ್ನಗಿರಿ, ಜಕ್ಕಲಿ, ಹಂಪಸಾಗರ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಗಣ್ಯರು ಉಪಸ್ಥಿತರಿದ್ದರು. ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ, ವಾರ್ತಾ ಕಾರ್ಯದರ್ಶಿ ಗುರುಮೂರ್ತಿ ಯರಗಂಬಳಿಮಠ, ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ, ಜುಂಜಪ್ಪ ಹೆಗ್ಗಪ್ಪನವರ ಉಪಸ್ಥಿತರಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಹಾಗೂ ಶಿವಮೊಗ್ಗದ ಶಾಂತಾ ಆನಂದ ಇವರಿಂದ ಸಂಗೀತ, ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಇವರಿಂದ ನಿರೂಪಣೆ ನಡೆದವು. ಸಮಾರಂಭದ ನಂತರ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಸರ್ವ ಸದ್ಭಕ್ತರು ಬನ್ನಿ ಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡೆದರು.
ಅಡ್ಡಪಲ್ಲಕ್ಕಿ: ಕಡೇನಂದಿಹಳ್ಳಿ ಹೋಳಿನ ಹಂಪೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು ಅಡ್ಡಪಲ್ಲಕ್ಕಿ ಮಹೋತ್ಸವದ ಮೂಲಕ ಬನ್ನಿ ಮಂಟಪಕ್ಕೆ ಆಗಮಿಸಿ ಶಮೀ ಪೂಜೆ ನೆರವೇರಿಸಿದರು.
ಅಗ್ರೋದಕ : ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಲೋಕಕಲ್ಯಾಣಕ್ಕಾಗಿ ಇಷ್ಟಲಿಂಗ ಪೂಜೆ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಇದಕ್ಕೂ ಮುನ್ನ ಶ್ರೀ ಮಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದಿಂದ ಸ್ವತ: ಶ್ರೀ ರಂಭಾಪುರಿ ಜಗದ್ಗುರುಗಳು ಕುಂಭ ಹೊತ್ತು ಅಗ್ರೋದಕವನ್ನು ತಂದರು.

























Discussion about this post