ಚಿಕ್ಕಮಗಳೂರು: ರಕ್ತದಾನ ಶ್ರೇಷ್ಟದಾನವಾಗಿದ್ದು, ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವವನ್ನು ಉಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಹೇಳಿದರು.
ಅವರು ಇಂದು ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ನಮ್ಮಂತಹ ದಾನಿಗಳಿರುವುದರಿಂದ ರಕ್ತದಲ್ಲಿನ ಕೊರತೆ ಕಂಡು ಬಂದಿಲ್ಲ ಎಂದ ಅವರು ರಾಜ್ಯದಲ್ಲಿ ಶೇ ೧% ರಷ್ಟು ರಕ್ತದ ಅವಶ್ಯಕತೆ ಇದ್ದು, ಸಂದರ್ಭಕ್ಕೆ ಸರಿಯಾಗಿ ರಕ್ತದ ಪೂರೈಕೆಯಾಗುತ್ತಿರುವುದರಿಂದ ಇದುವರೆಗೂ ಯಾವುದೇ ರೀತಿಯ ರಕ್ತದ ಕೊರೆತೆ ಕಂಡುಬಂದಿಲ್ಲ ಎಂದು ತಿಳಿಸಿದರು.
ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಮಾಜ ಮುಖಿ ಕಾರ್ಯಕ್ರಮದಲ್ಲಿ ಒಂದಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ರಕ್ತದಾನ ಶಿಬಿರದಲ್ಲಿ ಅಲ್ಪಮಟ್ಟಿಗೆ ಹಿನ್ನಡೆಯಾಗಿದ್ದು, ಕಡಿಮೆ ಸಮಯದಲ್ಲಿಯೂ ಸಹ ೨ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿಯೂ ಕೂಡ ಜನರು ಹಿಂಜರಿಯದೆ ರಕ್ತದಾನ ಮಾಡುವಲ್ಲಿ ಮುಂದಾಗಿದ್ದಾರೆ ಎಂದು ಹೇಳಿದರು.
ಸರ್ಕಾರಿ ನೌಕರರು ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಬಿಡುವಿನ ಸಮಯದಲ್ಲಿ ತಮ್ಮ ಕುಟುಂಬದ ಕಡೆಗೂ ಗಮನಹರಿಸಬೇಕು ಅದರ ಜೊತೆಗೆ ಸರ್ಕಾರಿ ನೌಕರರ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕುವಂತಹ ಪ್ರಬಂಧ ಸ್ಪರ್ಧೆ, ನೃತ್ಯ, ನಾಟಕ, ಸಂಗೀತಾ, ಕ್ರೀಡೆ, ಮೊದಲಾದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ತಿಳಿಸಿದರು.
ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿ ಡಾ. ಹೆಚ್.ಎಲ್ ನಾಗರಾಜು ಮಾತನಾಡಿ, ರಕ್ತದಾನ ಕೇವಲ ರಕ್ತದಾನವಾಗಿರದೆ ಜೀವದಾನವಾಗಿದ್ದು, ಸಾರ್ವಜನಿಕರ ಜೀವ ಉಳಿಸುವಲ್ಲಿ ಇಂತಹ ಅನೇಕ ಕಾರ್ಯಕ್ರಮಗಳು ಜರುಗಲಿ ಎಂದ ಅವರು ನಮ್ಮ ಚಿಕ್ಕಮಗಳೂರು ನೌಕರರ ಸಂಘ ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆ ಹೆಸರು ಬರುವಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದರು.
೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮುಂದಿನ ತಿಂಗಳು ೧೫ ನೇ ತಾರೀಖಿನವರೆಗೂ ಪ್ರತಿ ಶನಿವಾರ ಸಮಾಜಕ್ಕೆ ಒಳಿತಾಗುವಂತಹ ಮತ್ತು ಉಪಕಾರಿಯಾಗುವಂತಹ ಕಾರ್ಯಕ್ರಮಗಳನ್ನು ಸರ್ಕಾರಿ ನೌಕರರಾದ ನಾವು ನಮ್ಮ ನೌಕರರ ಸಂಘಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ದೇವೆಂದ್ರಪ್ಪ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ. ಮುರಳಿಧರ್, ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























Discussion about this post