ಚಿಕ್ಕಮಗಳೂರು: ರಾಜಕಾರಣದಲ್ಲಿ ಮತ್ತು ಬದುಕಿನಲ್ಲಿ ನಿವೃತ್ತಿ ಎಂಬುದಿಲ್ಲ ಎಂದು ರಾಜ್ಯ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ|| ಬಿ.ಎಲ್.ಶಂಕರ್ ಹೇಳಿದರು.
ಭಾರತ ಸೇವಾದಳದ ಜಿಲ್ಲಾ ಘಟಕ ಮಾಜಿ ಶಾಸಕ ಐ.ಬಿ.ಶಂಕರ್ ಅವರ ೭೭ನೇ ಜನ್ಮ ದಿನದ ಅಂಗವಾಗಿ ನಗರದ ಎಂ.ಎಲ್.ವಿ. ರೋಟರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಭಿಪ್ರಾಯದಂತೆ ರಾಜಕಾರಣ ಮಾಡುವವರು ನಿವೃತ್ತರಾಗುವುದಿಲ್ಲ. ಅವರು ಕ್ರಮೇಣ ಮರೆಯಾಗಿ ಹೋಗುತ್ತಾರೆ. ತಿಳಿದವರು ಮತ್ತು ಅನುಭವಿಗಳ ಪ್ರಕಾರ ಬದುಕು ಎಂದರೆ ಸಾವಿನೆಡೆಗೆ ನಿರಂತರವಾಗಿ ಪಯಣಿಸುವುದಷ್ಟೇ ಎಂದರು.
ಭಗವಂತ ಶ್ರೀರಾಮ, ಶ್ರೀಕೃಷ್ಣ, ರಾಮಕೃಷ್ಣ ಪರಹಂಸರು ಸೇರಿದಂತೆ ಎಲ್ಲಾ ಮಹಾತ್ಮರು ದೇಹ ವನ್ನು ತ್ಯಜಿಸಿದ್ದಾರೆ. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರ ವಿಚಾರಧಾರೆಗಳು ನಮ್ಮಲ್ಲಿ ಉಳಿದಿವೆ. ಹಾಗೇ ಇಲ್ಲಿ ನಾವು ಬದುಕಿದ್ದೆವು ಎನ್ನುವುದಕ್ಕಿಂತ ಹೇಗೆ ಬದುಕಿದ್ದೆವು ಎಂಬುವುದು ಮುಖ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ರಾಜಕಾರಣದಲ್ಲಿ ಶುದ್ದಹಸ್ತರು ಮತ್ತು ಉನ್ನತ ವ್ಯಕ್ತಿತ್ವ ಹೊಂದಿರುವ ಐ.ಬಿ.ಶಂಕರ್ ಅವರು ತಮ್ಮ ಜೀವನದ ಅನುಭವಗಳನ್ನು ತಮ್ಮ ವಿಚಾರಧಾರೆಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಇಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ಮಾಡಿದರು.
ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಕಬ್ಬಿನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಐ.ಬಿ. ಶಂಕರ್ ಅವರು ಜನತಾಪಕ್ಷದ ಜಿಲ್ಲಾಧ್ಯಕ್ಷರಾಗಿ, ಶಾಸಕರಾಗಿ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರು, ಭಾರತ ಸೇವಾದಳದ ಪದಾಧಿಕಾರಿಗಳು ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಲ್ಲಿ ದುಡಿಯುವ ಮೂಲಕ ಜಿಲ್ಲೆಯಲ್ಲಿ ಗುರುತರವಾದಂತಹ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಐ.ಬಿ.ಶಂಕರ್ ದಂಪತಿಯನ್ನು ಭಾರತ ಸೇವಾದಳದ ಜಿಲ್ಲಾ ಸಮಿತಿ, ಕೇಂದ್ರ ಮತ್ತು ರಾಜ್ಯ ಘಟಕ, ವಿವಿಧ ಪಕ್ಷಗಳು ಹಾಗೂ ಸಂಘಟನೆಗಳಿಂದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಐ.ಬಿ.ಶಂಕರ್ ತಮ್ಮ ಹಿರಿಯರು ಮಾಡಿದ ಪುಣ್ಯದಿಂದಾಗಿ ತಮಗೆ ಈಗ ಗೌರವ ಲಭಿಸಿದ್ದು ಇದರಲ್ಲಿ ತಮ್ಮ ಪಾಲೇನೂ ಇಲ್ಲ ಎಂದು ಹೇಳಿದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಕೆ.ಕಲ್ಮರುಡಪ್ಪ, ಕಾರ್ಯದರ್ಶಿ ಹಂಪಯ್ಯ, ಖಜಾಂಚಿ ಜಗದೀಶಾಚಾರ್, ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗದೀಶ್, ಜಿಲ್ಲಾ ಸಂಘಟಕ ಚಂದ್ರಕಾಂತ್, ತಾಲ್ಲೂಕು ಸಂಘಟಕ ಎಸ್.ಇ.ಲೋಕೇಶ್ವರಾ ಚಾರ್, ಸದಸ್ಯರಾದ ಶಾಂತಕುಮಾರ್, ಡಿ.ತಿಮ್ಮೇಗೌಡ, ರಮೇಶ್, ಶಿವರತನ್ ಸಂಚೇತಿ, ರವಿಶಂಕರ್, ರಾಜ್ಯ ಸಮಿತಿ ಸದಸ್ಯೆ ಉಮಾ ಐ.ಬಿ.ಶಂಕರ್, ತಾಲ್ಲೂಕು ಕ್ರೀಡಾಧಿಕಾರಿ ಇ.ಆರ್.ಸೋಮಶೇಖರ್, ಸಾಹಿತಿ ಬಿ.ತಿಪ್ಪೇರುದ್ರಪ್ಪ, ಎಸ್.ಎಂ.ಮಹೇಶಪ್ಪ, ಮಮತ ಉಪಸ್ಥಿತರಿದ್ದರು.

























Discussion about this post