ಚಿಕ್ಕಮಗಳೂರು : ರಾಜ್ಯದ ಮೇಲೆ ಹಿಂದಿ ಭಾಷೆಯನ್ನು ಹೇರುವ ಮೂಲಕ ಕೇಂದ್ರ ಸರ್ಕಾರ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಕÀರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು, ನಗರದ ಆಜಾದ್ ಪಾರ್ಕ್ ವೃತ್ತದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಬಾರದು, ಪ್ರಾದೇಶಿಕ ಭಾಷೆಗೆ ಒತ್ತು ನೀಡಬೇಕು, ಉಳಿಸಿ ಉಳಿಸಿ ಕನ್ನಡ ಉಳಿಸಿ, ಬೇಡ ಬೇಡ ಹಿಂದಿ ಬೇಡ, ಎಂಬಿತ್ಯಾದಿ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ ಕೇಂದ್ರ ಸರ್ಕಾರ ಪ್ರತಿಯೊಂದು ರಂಗದಲ್ಲಿಯೂ ರಾಷ್ಟ್ರ ಭಾಷೆ ಹೆಸರಿನಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುತ್ತಿದೆ. ಒಕ್ಕೂಟ ರಾಜ್ಯಗಳು ಕಟ್ಟುವ ತೆರಿಗೆ ರೂಪದ ಸಾವಿರಾರು ಕೋಟಿ ರೂ.ಹಣದಲ್ಲಿ ಸಿಂಹಪಾಲು ಹಣವನ್ನು ಕೇವಲ ಹಿಂದಿಗೆ ನೀಡಿ ಉಳಿದ ಪ್ರಾದೇಶಿಕ ಭಾಷೆಗಳನ್ನು ಕೀಳಾಗಿ ಕಾಣುತ್ತಿರುವುದನ್ನು ಸಹಿಸಲು ಆಗುವುದಿಲ್ಲ. ಒಂದು ವೇಳೆ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಹೇರಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಹಿಂದಿ ಭಾಷೆಯನ್ನು ಹೇರಿಕೆ ಮಾಡಬಾರದು, ಪ್ರಾದೇಶಿಕ ಭಾಷೆಗೆ ಒತ್ತು ನೀಡಬೇಕು, ಕೇಂದ್ರದಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿದ್ದು, ರಾಜ್ಯದಲ್ಲಿ ಪದೇ ಪದೇ ಹಿಂದಿ ಹೇರಿಕೆ ಮೂಲಕ ಕನ್ನಡ ವಿರೋಧಿ ಧೋರಣೆ ತಳೆಯುತ್ತಿದೆ. ಒಕ್ಕೂಟ ಭಾರತದಲ್ಲಿ ಒಂದೊAದು ರಾಜ್ಯವೂ ತನ್ನದೆ ಆದ ಭಾಷೆ ಮತ್ತು ಸಂಸ್ಕತಿಯನ್ನು ಹೊಂದಿದೆ. ಹಿಂದಿ ಭಾಷೆಗಿಂತಲೂ ಪುರಾತನ ಹಾಗೂ ಪ್ರಾಚೀನ ಭಾಷೆಗಳ ಇತಿಹಾಸ ಹಲವು ರಾಜ್ಯಗಳಿಗಿದೆ. ಕೇಂದ್ರ ಸರ್ಕಾರದ ಸಂಪರ್ಕ ಭಾಷೆಯಾದ ಮಾತ್ರಕ್ಕೆ ಹಿಂದಿಗೆ ರಾಷ್ಟ್ರೀಯ ಮಾನ್ಯತೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕನ್ನಡ ವಿರೋಧಿ ನೀತಿ ಕ್ರಮ ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ಹೊರಹಾಕಿದರು.
ಹಿಂದಿ ಭಾಷೆಯ ಹೇರಿಕೆ ಮಾಡುವ ಮೂಲಕ ಭಾರತ ದೇಶದ ಒಕ್ಕೂಟದ ವ್ಯವಸ್ಥೆಗೆ ಕೇಂದ್ರ ಸರ್ಕಾರ ಮಾಡಿದ ಅಗೌರವವಾಗಿದೆ. ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುವುದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ನೌಕರಿ ಸಿಗುವುದಿಲ್ಲ. ಇದರಿಂದಾಗಿ ಕೇಂದ್ರ ಸರ್ಕಾರ ತಕ್ಷಣವೇ ಹಿಂದಿ ಭಾಷೆ ಹೇರಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಭಾರತೀಯರ ಇತರೆ ಭಾಷೆಗಳ ಮೇಲೆ ಹಿಂದಿಯನ್ನು ಹೇರುವುದು ನಿರಂತರವಾಗಿ ನಡೆಯುತ್ತಿದೆ. ಹಿಂದಿ ಭಾಷೆಗೆ ಯಾರೂ ವಿರೋಧಿಸುತ್ತಿಲ್ಲ. ಒಂದು ಭಾಷೆಯಾಗಿ ಎಲ್ಲರೂ ಹಿಂದಿಯನ್ನು ಗೌರವಿಸುತ್ತಾರೆ ಆದರೆ, ಇತರ ಭಾಷಿಗರ ಮೇಲೆ ಹಿಂದಿ ಹೇರಿಕೆಯನ್ನು ಸರ್ಕಾರ ನಿರಂತರ ಮುಂದುವರಿಸುತ್ತಿದೆ. ಉದ್ಯೋಗಗಳನ್ನು ಹಿಂದಿ ಭಾಷಿಗರು ಕಿತ್ತುಕೊಳ್ಳುತ್ತಿದ್ದಾರೆ. ಹಿಂದಿಯೇತರ ಭಾಷಿಗರ ಸಾಂಸ್ಕೃತಿಕ ಅಸ್ಮಿತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಧೋರಣೆಯನ್ನು ನಾವು ಖಂಡಿಸುತ್ತೇವೆ ಎಂದು ಅಸಮಾಧಾನ ಹೊರಹಾಕಿದರು.
ಭಾರತದ ಸಂವಿಧಾನದಲ್ಲಿ ರಾಷ್ಟ್ರದ ಯಾವುದೇ ರಾಜ್ಯದ ಮೇಲೆ ನಿರ್ದಿಷ್ಟವಾದ ಭಾಷಾ ಹೇರಿಕೆ ನಿಯಮಗಳು ಇಲ್ಲದಿದ್ದರೂ ಕೇಂದ್ರ ಸರ್ಕಾರ ರಾಜ್ಯದಲ್ಲಿ ಒತ್ತಾಯಪೂರ್ವಕವಾಗಿ ಹಿಂದಿ ಸಪ್ತಾಹ ಕಾರ್ಯಕ್ರಮದ ಮೂಲಕ ಕನ್ನಡ ವಿರೋಧಿ ಧೋರಣೆ ತೋರಿಸುತ್ತಿದೆ. ಕರ್ನಾಟಕದ ಕನ್ನಡ ಭಾಷೆಯ ಮೇಲೆ ಪದೇಪದೇ ಹಿಂದಿ ಹೇರಿಕೆಯ ಕ್ರಮವನ್ನು ಅನುಸರಿಸುತ್ತಿದೆ ಇದು ಖಂಡನೀಯವಾದುದು. ಕೂಡಲೇ ಹಿಂದಿ ಭಾಷೆಯನ್ನು ಹೇರಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಉಪಾಧ್ಯಕ್ಷ ಅಶೋಕ್ ಕೆಂಪನಹಳ್ಳಿ, ದಶರಥರಾಜ್ ಅರಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಂಚಾಕ್ಷರಿ, ತಾಲ್ಲೂಕು ಉಪಾಧ್ಯಕ್ಷ ಮದನ್, ಜಿಲ್ಲಾ ಯುವಘಟಕದ ಅಧ್ಯಕ್ಷ ಕುಮಾರ್ ಆರ್.ಶೆಟ್ಟಿ. ಜಿಲ್ಲಾ ಕಾರ್ಯದರ್ಶಿ ಶಶಿ ಆಣೂರು, ಚಿಕ್ಕಮಗಳೂರು ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ನಾಗಲತಾ, ಪ್ರೇಮಾಶ್ರೀನಿವಾಸ್, ಇರ್ಷದ್ ಅಹಮದ್, ಚೇತನ್, ಭರತ್ರಾಜ್, ಮಹಮದ್ ಹನೀಫ್, ಪ್ರಸನ್ನ, ಶ್ರೀಧರ್ ಸೇರಿದಂತೆ ಮತ್ತಿತರರು ಇದ್ದರು.

























Discussion about this post