ಚಿಕ್ಕಮಗಳೂರು: ಅಕ್ಟೋಬರ್ 8ನೇ ತಾರೀಖಿನಂದು ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಭೇಟಿ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪೂರ್ವ ತಯಾರಿ ನಡೆಸುತ್ತಿದ್ದು ಈ ಒಂದು ದಿನದ ಖಾಸಗೀ ಭೇಟಿಗೆ ವ್ಯವಸ್ಥೆಯ ಹಾಗೂ ರಕ್ಷಣೆಯ ದೃಷ್ಟಿಯಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ.
ಶೃಂಗೇರಿಯ ಗಾಂಧಿ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದ್ದು, ಎಡೆಬಿಡದೆ ಕಾಮಗಾರಿ ನಡೆಯುತ್ತಿದೆ. ಇದೇ ಕಾರಣದಿಂದ ಗಾಂಧಿ ಮೈದಾನದ ವ್ಯಾಪಾರಸ್ಥರು ಸಹ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿದ್ದಾರೆ. ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿರುವುದಾಗಿ ವ್ಯಾಪಾರಸ್ಥರು ಹೇಳಿದ್ದಾರೆ.
ಮತ್ತೊಂದೆಡೆ ಪಟ್ಟಣ ಪಂಚಾಯಿತಿ ವತಿಯಿಂದ ಹೊಸದಾಗಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದ್ದು, ಮೊದಲೇ ಆದಾಯವಿಲ್ಲದ ಶೃಂಗೇರಿ ಪಟ್ಟಣ ಪಂಚಾಯಿತಿಗೆ ನಷ್ಟವಾಗಲಿದೆ. ಭೇಟಿಯ ತಯಾರಿಯ ಪೂರ್ವಭಾವಿ ಸಭೆಯ ನಿರ್ಧಾರದಂತೆ ಹೆಲಿಪ್ಯಾಡ್ ನಿರ್ಮಾಣ ದೃಷ್ಟಿಯಿಂದ ಗಾಂಧಿ ಮೈದಾನದಲ್ಲಿ ಇರುವ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದ್ದು, ಕಟಾವು ಕಾರ್ಯ ನಡೆಯುತ್ತಿದೆ. ಸಾಕಷ್ಟು ಪರಿಸರ ಹಾನಿ ಆಗಿದೆ.
ಶೃಂಗೇರಿಯಲ್ಲೇ ಖಾಯಂ ಹೆಲಿಪ್ಯಾಡ್ ಅಭಿವೃದ್ಧಿಗೊಳಿಸಿದರೆ ಅಲ್ಲಿಯೇ ಎಲ್ಲಾ 3 ಹೆಲಿಕಾಪ್ಟರ್ ಇಳಿಸಬಹುದು, ಆದರೆ ಅದರೆಡೆಗೆ ನಿರ್ಲಕ್ಷ್ಯವಹಿಸಿ ಈಗ ತಾತ್ಕಾಲಿಕ ಹೆಲಿಪ್ಯಾಡ್ ಗೆ ಹಣ ಖರ್ಚು ಮಾಡುತ್ತಿರುವುದು ಸಾರ್ವಜನಿಕರ ಹಣದ ದುಂದುವೆಚ್ಚ ತಡೆಗಟ್ಟಬಹುದಿತ್ತು ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

























Discussion about this post