ಚಿಕ್ಕಮಗಳೂರು: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಸತಿ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾದೀನ ಪಡಿಸಿಕೊಳ್ಳುವ ಯಾವುದೇ ಪ್ರಸ್ತಾವನೆ ಇಲ್ಲ. ರೈತರು ಭೂಮಿ ನೀಡಲು ಸಮ್ಮತಿಸಿದ್ದಲ್ಲಿ ಅವರ ಸಹಭಾಗಿತ್ವದೊಂದಿಗೆ ಪ್ರಾಧಿಕಾರದಿಂದ ವಸತಿ ಯೋಜನೆ ರೂಪಿಸಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್ ಸ್ಪಷ್ಟಪಡಿಸಿದರು.
ಅವರು ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಸರ್ಕಾರದ ಆದೇಶದಂತೆ ರೈತರ ಸಹಭಾಗಿತ್ವದಡಿ ವಸತಿ ಯೋಜನೆಯನ್ನು ಶೇ ೫೦:೫೦ ರ ಅನುಪಾತದಲ್ಲಿ ರೂಪಿಸಲು ರೈತರ ಸಭೆ ಕರೆಯಲಾಗಿತ್ತು. ಪ್ರಾಧಿಕಾರದಿಂದ ವಸತಿ ಯೋಜನೆಗೆ ಸಂಬಂಧಿಸಿದಂತೆ ರೈತರಿಂದ ಭೂ ಸ್ವಾಧೀನ ಪಡಿಸಿಕೊಳ್ಳುವ ಯಾವುದೇ ಪ್ರಸ್ತಾವನೆಯನ್ನು ಅವರ ಮುಂದಿಟ್ಟಿಲ್ಲ ಬದಲಾಗಿ ರೈತರೇ ಒಪ್ಪಿ ಭೂಮಿ ನೀಡಿದ್ದಲ್ಲಿ ಅವರ ಸಹಭಾಗಿತ್ವದಲ್ಲಿ ವಸತಿ ಬಡಾವಣೆ ನಿರ್ಮಿಸಲಾಗುವುದು ರೈತರಿಂದ ಭೂಮಿ ನೀಡಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದಲ್ಲಿ ಆ ವ್ಯಾಪ್ತಿಯ ಯೋಜನೆ ಕೈಬಿಟ್ಟು ಬೇರೆಡೆ ವಸತಿ ಬಡಾವಣೆಗೆ ಯೋಜನೆ ರೂಪಿಸಲಾಗುವುದು ಇಲ್ಲಿ ಯಾವುದೇ ರೈತರ ಮೇಲೆ ಭೂಮಿ ನೀಡಲು ನಗರಾಭಿವೃದ್ಧಿ ಪ್ರಾಧಿಕಾರ ಒತ್ತಡ ಹೇರಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೆಲವು ರಿಯಲ್ ಎಸ್ಟೇಟ್ ಮತ್ತು ಮಧ್ಯವರ್ತಿಗಳು ರೈತರಿಂದ ಕೃಷಿ ಭೂಮಿ ಖರೀದಿಸಿ ಅವುಗಳನ್ನು ತುಂಡಾಗಿ ವಿಭಜಿಸಿ ಮಾರಾಟ ಮಾಡಿ ರೈತರು ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದಾಗಿ ಯೋಜನಾಬದ್ದ ನಗರದ ಬೆಳವಣಿಗೆಗೆ ಮಾರಕವಾಗಲಿದೆ. ಜತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ತೊಡಕುಂಟಾಗುತ್ತಿದೆ ಎಂದು ಹೇಳಿದರು.
ವಸತಿ ಬಡಾವಣೆ ನಿರ್ಮಾಣ ಯಾವುದೇ ರಾಜಕೀಯ ಪೂರಿತವಾಗಿಲ್ಲ, ಬದಲಾಗಿ ನಗರವನ್ನು ಸುಸ್ಸಜ್ಜಿತ ಮಾದರಿ ಲೇಔಟ್ಗಳ ನಿರ್ಮಾಣ ಮಾಡಿ ಪ್ರತಿಯೊಬ್ಬ ವಸತಿ ರಹಿತರಿಗೆ ಸೂರು ಒದಗಿಸುವ ಗುರಿ ಹೊಂದಲಾಗಿದೆ. ರಾಜ್ಯಾದ್ಯಾಂತ ಈಗಾಗಲೇ ೨೦ ಪ್ರಾಧಿಕಾರಗಳು ಶೇ ೫೦:೫೦ ರ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮವಹಿಸುತ್ತಿವೆ. ಈ ಯೋಜನಾ ವ್ಯಾಪ್ತಿಯಲ್ಲಿ ಬರುವ ಬಿಳೇಕಲ್ಲು, ಕುರುವಂಗಿ, ಕನ್ನೇನಹಳ್ಳಿ, ಬಂಡಿಹಳ್ಳಿ, ಚಿಕ್ಕಕುರುಬರಹಳ್ಳಿ, ಹಿರೇಮಗಳೂರು ಗ್ರಾಮಗಳ ಸುಮಾರು ೫೦ ರೈತರು ಪಹಣಿಗಳನ್ನು ನೀಡಿ ಮೌಖಿಕವಾಗಿ ಯೋಜನೆ ರೂಪಿಸಲು ಸಮ್ಮತಿ ನೀಡಿದ್ದಾರೆ ಎಂದು ತಿಳಿಸಿದರು.
ರೈತರು ಸಹಭಾಗಿತ್ವದಲ್ಲಿ ವಸತಿ ಬಡಾವಣೆಗೆ ಭೂಮಿ ನೀಡಿದ್ದಲ್ಲಿ ಮೂಲಭೂತ ಸೌಕರ್ಯ ಒಳಗೊಂಡ ಸುವ್ಯವಸ್ಥಿತ ಯೋಜನಬದ್ದವಾದ ವಸತಿ ವಿನ್ಯಾಸದಲ್ಲಿ ಯಾವುದೇ ಬಂಡವಾಳವಿಲ್ಲದೇ ಅಭಿವೃದ್ಧಿಪಡಿಸಿದ ಶೇ ೫೦ ರಷ್ಟು ವಸತಿ ನಿವೇಶನಗಳನ್ನು ಶೇ ೫೦:೫೦ ರ ಅನುಪಾತದಲ್ಲಿಪಡೆಯಬಹುದಾಗಿದೆ. ಜಮೀನಿನ ಭೂಪರಿವರ್ತನೆ, ವಿನ್ಯಾಸ, ಅನುಮೋದನೆ, ಸರ್ಕಾರದ ಮಂಜೂರಾತಿ ಜವಾಬ್ದಾರಿಯನ್ನು ಪ್ರಾಧಿಕಾರವೇ ವಹಿಸಿಕೊಳ್ಳಲಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರವು ಯಾವುದೇ ರಿಯಲ್ ಎಸ್ಟೇಟ್ ದಂದೆ ನಡೆಸುವ ಸಂಸ್ಥೆಯಲ್ಲ ಬದಲಾಗಿ ಸರ್ಕಾರದ ಒಂದು ಅಂಗ ರೈತರಿಗೆ ತೊಂದರೆ ನೀಡಿ , ಒತ್ತಡ ಹಾಕಿ ಲೇಔಟ್ ನಿರ್ಮಾಣ ಮಾಡುವ ಯಾವುದೇ ದುರುದ್ದೇಶ ಪ್ರಾಧಿಕಾರಕ್ಕಿಲ್ಲ. ಸ್ಥಳೀಯ ಶಾಸಕರು ಕೂಡ ಈ ಬಗ್ಗೆ ನಿರ್ದೇಶನ ನೀಡಿದ್ದು ಲೇಔಟ್ ನಿರ್ಮಾಣಕ್ಕೆ ರೈತರು ಭೂಮಿ ನೀಡಲು ಒಪ್ಪಿದ್ದಲ್ಲಿ ಮಾತ್ರವೇ ಇದನ್ನು ಯೋಜನೆ ರೂಪಿಸಿ ಇಲ್ಲವಾದಲ್ಲಿ ಬೇರೆಡೆ ಸ್ಥಳಗುರುತಿಸಲು ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಮೃದ್ ಪೈ, ರಾಜಕುಮಾರ್, ಮಂಜುನಾಥ್, ಪ್ರಾಧಿಕಾರದ ನಗರ ಯೋಜನಾ ಸದಸ್ಯ ಶಿವಕುಮಾರ್ ಇದ್ದರು

























Discussion about this post