ಭಾರತಮಾತೆಯ ಹೆಮ್ಮೆಯ ವರಪುತ್ರ, ದೇಶದ 2ನೇ ಪ್ರಧಾನಮಂತ್ರಿ, ಸರಳತೆ-ಸಜ್ಜನಿಕೆಯ ಸಾಕಾರಮೂರ್ತಿ, ಪ್ರಾಮಾಣಿಕತೆ-ಸ್ವಾಭಿಮಾನಗಳ ಪ್ರತಿರೂಪ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿಯವರ 118ನೇ ಜನ್ಮದಿನ ನಾಳೆ ಆಕ್ಟೋಬರ್ 2, 2021 ರಂದು. ರಾಷ್ಟ್ರಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಸ್ವಾತಂತ್ರ್ಯಹೋರಾಟದ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದವರು ಶಾಸ್ತ್ರೀಜಿ.
ಶಾಸ್ತ್ರೀಜಿಯವರು 1904ರ ಅಕ್ಟೋಬರ್ 2ರಂದು ಶ್ರೀ ಶಾರದಾಪ್ರಸಾದ್ ಶ್ರೀವಾಸ್ತವ ಮತ್ತು ಶ್ರೀಮತಿ ರಾಮ್‌ದುಲಾರೀದೇವಿ ದಂಪತಿಗಳ ಮಗನಾಗಿ ಉತ್ತರಪ್ರದೇಶದ ವಾರಣಾಸಿ ಬಳಿಯ ಮುಘಲ್‌ಸರಾಯ್‌ನಲ್ಲಿ ಜನಿಸಿದರು. ಕಾಕತಳೀಯವೆಂಬಂತೆ, ಮಹಾತ್ಮಾಗಾಂಧಿಯವರು ಜನಿಸಿದ ದಿನಾಂಕವೂ ಅಕ್ಟೋಬರ್ 2ರಂದೇ. ಹೀಗಾಗಿ, ಅಕ್ಟೋಬರ್ 2ನೇ ದಿನಾಂಕವು ಭಾರತ ಹಾಗೂ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ.
ತಮ್ಮ ವಿದ್ಯಾರ್ಥಿಜೀವನದಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಶಾಸ್ತ್ರೀಜಿಯವರು ಪ್ರಾರಂಭಿಕ ಶಿಕ್ಷಣವನ್ನು ಹರಿಶ್ಚಂದ್ರ ಉಚ್ಚವಿದ್ಯಾಲಯದಲ್ಲಿ ಪಡೆದರು. ನಂತರ ಕಾಶಿ ವಿದ್ಯಾಪೀಠದಲ್ಲಿ ತಮ್ಮ ಶಿಕ್ಷಣ ಮುಂದುವರೆಸಿ “ಶಾಸ್ತ್ರೀ” ಎಂಬ ಅಭಿದಾನಕ್ಕೆ ಪಾತ್ರರಾದರು. ಮಹಾತ್ಮಾಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ತಮ್ಮ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ ಶಾಸ್ತ್ರೀಜಿ ಸ್ವಾತಂತ್ರ್ಯಸಂಗ್ರಾಮದಲ್ಲಿ ಪ್ರಮುಖಪಾತ್ರ ವಹಿಸಿದರು.ಇದರ ನಿಮಿತ್ತ ಅವರು 9 ವರ್ಷಗಳಿಗೂ ಹೆಚ್ಚು ಕಾಲ ಕಾರಾಗೃಹವಾಸ ಅನುಭವಿಸಿದರು.
ಸ್ವಾತಂತ್ರ್ಯಾನಂತರ ಶಾಸ್ತ್ರೀಜಿಯವರು 1951ರಲ್ಲಿ ಕಾಂಗ್ರೆಸ್‌ನ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ತದನಂತರ ಶ್ರೀ ಗೋವಿಂದವಲ್ಲಭ ಪಂತ್‌ರ ಸರಕಾರದಲ್ಲಿ ಪೋಲೀಸ್ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದರು. ಬಳಿಕ, ಕೇಂದ್ರಸರ್ಕಾರದಲ್ಲಿ ರೈಲ್ವೇಸಚಿವರಾಗಿ ನಿಯುಕ್ತರಾದರು. ಈ ಸಂದರ್ಭದಲ್ಲಿ ಅರಿಯಳೂರು ಬಳಿ ಆದ ರೈಲು ಅಪಘಾತದ ನೈತಿಕ ಹೊಣೆಹೊತ್ತು ತಮ್ಮ ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿ ಉನ್ನತಸ್ಥಾನದಲ್ಲಿರುವವರು ಹೊಂದಿರಬೇಕಾದ ನೈತಿಕತೆಯ ಮಟ್ಟವನ್ನು ತೋರಿಸಿಕೊಟ್ಟರು.
ತದನಂತರ, ಮತ್ತೊಮ್ಮೆ ಕ್ಯಾಬಿನೆಟ್‌ಗೆ ಮರಳಿದ ಶಾಸ್ತ್ರೀಜಿ ಮೊದಲು ಸಾರಿಗೆ ಸಚಿವರಾಗಿ ಹಾಗೂ 1961 ಗೃಹಸಚಿವರಾಗಿ ಕಾರ್ಯ ನಿರ್ವಹಿಸಿದರು. ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ರವರ ಮರಣಾನಂತರ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ದೇಶಕ್ಕೆ ಅತ್ಯುತ್ತಮ ನಾಯಕತ್ವವನನ್ನು ನೀಡಿದರು.
ಅವರ ಕಾಲಾವಧಿಯಲ್ಲಿ ಪಾಕಿಸ್ತಾನದೊಡನೆ ಯದ್ಧ ಸಂಭವಿಸಿ ಭಾರತ ಪಾಕಿಸ್ತಾನದ ಮೇಲೆ ಅದ್ಭುತ ಜಯಗಳಿಸಿತು. ಪ್ರಧಾನಿ ಸ್ಥಾನದಲ್ಲಿದ್ದಾಗಲೂ ಯಾವುದೇ ದುಂದುಗಾರಿಕೆ ಮಾಡದೇ ಅತ್ಯಂತ ಸರಳಜೀವನ ನಡೆಸಿ ದೇಶದ ಜನರಿಗೂ ಮಾದರಿಯಾದರು. ಯುದ್ಧ-ಬರಗಾಲ ಮುಂತಾದ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ತಾವೂ ಒಂದು ಹೊತ್ತಿನ ಊಟ ಬಿಟ್ಟು ದೇಶದ ಜನತೆಯೂ ಇದನ್ನೇ ಅನುಸರಿಸಬೇಕೆಂದು ಮನವಿ ಮಾಡಿದಾಗ ಇಡೀ ದೇಶದ ಜನ ಅವರ ಕರೆಗೆ ಸ್ಪಂದಿಸಿ ಅವರು ಹೇಳಿದಂತೆ ನಡೆದರು.
ದೇಶಕಾಯುವ ಹೆಮ್ಮೆಯ ಸೈನಿಕರು ಹಾಗು ಶ್ರಮಜೀವಿಗಳಾದ ರೈತರನ್ನು ಹುರಿದುಂಬಿಸಲು ಹಾಗೂ ಅವರಲ್ಲಿ ಉತ್ಸಾಹ ತುಂಬಲು “ಜೈ ಕಿಸಾನ್-ಜೈ ಜವಾನ್” ಎಂಬ ಉದ್ಘೋಷ ಮೊಳಗಿಸಿ ದೇಶದ ಜನತೆಯಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದರು.
ನಮ್ಮ ದೇಶದ ಮಹಾನ್ ನಾಯಕರಲ್ಲೊಬ್ಬರಾದ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮದಿನದಂದು ಅವರನ್ನು ಹಾಗೂ ಅವರು ಮಾಡಿದ ದೇಶಸೇವೆಯನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ಭಾರತೀಯರಾದ ನಾವೆಲ್ಲಾ ಅವರು ನಡೆದ ದಾರಿಯಲ್ಲಿ ನಡೆದು ದೇಶವನ್ನು ಸುದೃಢಗೊಳಿಸಬೇಕಿದೆ
ಅದರಲ್ಲೂ ನೈತಿಕತೆ ದಿನೇ-ದಿನೇ ಅಧೋಗತಿಗಿಳಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ನಮ್ಮ ಯುವಪೀಳಿಗೆ ಇಂತಹ ಮಹಾನಾಯಕರುಗಳ ಜೀವನಶೈಲಿ ಹಾಗೂ ಅವರು ಅನುಸರಿಸಿದ ಜೀವನಮೌಲ್ಯಗಳ ಬಗ್ಗೆ ತಿಳುವಳಿಕೆ ಹೊಂದಿದ್ದರೆ ಅವರ ಬಾಳೂ ಬಂಗಾರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

























Discussion about this post