ಚಂಡೀಗಡ: ಪಂಜಾಬ್ನ ಲೂಧಿಯಾನ ಜಿಲ್ಲಾ ಕೋರ್ಟ್ ಸಂಕೀರ್ಣದಲ್ಲಿ ಬುಧವಾರ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಉದ್ಯೋಗದಿಂದ ವಜಾಗೊಂಡಿದ್ದ ಪೋಲಿಸ್ ಹೆಡ್ ಕಾನ್ಸ್ಟೆಬಲ್ ಕಾರಣ ಎಂಬುದು ದೃಢಪಟ್ಟಿದೆ. ಕೋರ್ಟ್ನ ಎರಡನೇ ಮಹಡಿಯ ಶೌಚಾಲಯದಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಜೋಡಣೆ ಮಾಡುವಾಗ ಅದು ಸ್ಫೋಟಿಸಿ ಆರೋಪಿ ಗಗನ್ದೀಪ್ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಹೇಳಿದ್ದಾರೆ.
ಗಗನದೀಪ್ ಸಿಂಗ್ ಡ್ರಗ್ಸ್ ಪ್ರಕರಣದ ಸಂಬಂಧ 2019ರಲ್ಲಿ ಬಂಧಿತನಾಗಿದ್ದ ಮತ್ತು ಸೇವೆಯಿಂದ ವಜಾಗೊಂಡಿದ್ದ. ಈತ ಕಳೆದ ಸೆಪ್ಟೆಂಬರ್ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ, ಪ್ರಕರಣದ ವಿಚಾರಣೆಗೆ ಕೋರ್ಟ್‌ಗೆ ಬರುತ್ತಿದ್ದ. ಜಡ್ಜ್ ಮತ್ತು ವಕೀಲರನ್ನು ಹೆದರಿಸಲು ಶೌಚಾಲಯದಲ್ಲಿ ಸ್ಫೋಟಕ ಸಾಧನ ಇರಿಸಲು ಹೋಗಿ ಅದನ್ನು ಜೋಡಿಸುವ ವೇಳೆ ಸ್ಫೋಟಗೊಂಡ ಸತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಗಗನದೀಪ್ಗೆ ಮಾದಕವಸ್ತು ಜಾಲದೊಂದಿಗೆ ಮೊದಲೇ ನಂಟು ಇತ್ತು. ಈ ಪ್ರಕರಣದಲ್ಲಿ ಜೈಲು ಸೇರಿದ ಮೇಲೆ ಖಲಿಸ್ತಾನ್ ಉಗ್ರರು ಇಲ್ಲವೆ ಪಾಕ್ ಉಗ್ರರ ಜತೆ ನಂಟು ಹೊಂದಿರುವವರೊಂದಿಗೆ ಸಂಬಂಧ ಅಥವಾ ಐಎಸ್ಐ ಜತೆಗಿನ ನಂಟು ಹೊಂದಿರುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲ ಕೋನಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಆರೋಪಿಗೆ ಸ್ಫೋಟಕ ಸಾಮಗ್ರಿಗಳು ಎಲ್ಲಿ ಸಿಕ್ಕವು ಎಂಬ ಬಗ್ಗೆಗೂ ತನಿಖೆ ನಡೆಯುತ್ತಿದೆ. ಆತನ ಸ್ನೇಹಿತರು, ಸೋದರರನ್ನು ವಿಚಾರಣೆ ನಡೆಸಲಾಗುತ್ತಿದೆ. ಗಗನದೀಪ್ ಮನೆಯಲ್ಲಿದ್ದ ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಐಇಡಿ ಸ್ಫೋಟದಿಂದ ಐವರು ಗಾಯಗೊಂಡಿದ್ದರು. ಅಕ್ಕಪಕ್ಕದ ಕೋಣೆಗಳ ಕಿಟಕಿ ಗಾಜು ಒಡೆದಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ) ತಂಡಗಳು ಲೂಧಿಯಾನ ಕೋರ್ಟ್‌ಗೆ ಭೇಟಿ ನೀಡಿದ್ದವು.
Ludhiana Blast Accused Assembled Bomb In Court Washroom
ಇದನ್ನು ಓದಿ: Bomb Explosion: ಲೂಧಿಯಾನ ಕೋರ್ಟ್ ಸಂಕೀರ್ಣದಲ್ಲಿ ಸ್ಫೋಟ: ಒಬ್ಬನ ಸಾವು
ಇದನ್ನೂ ಓದಿ: ಬಿಹಾರದ ಗಯಾದಲ್ಲಿ ನಾಲ್ವರನ್ನು ಕೊಂದು ನೇಣಿಗೇರಿಸಿದ ನಕ್ಸಲರು
Discussion about this post