ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ೫೨ ಆರೋಪಿಗಳನ್ನು ಬಂಧಿಸಲಾಗಿದೆ. ತತ್ಸಂಬಂಧ ಪ್ರತ್ಯೇಕ ಆರೋಪಪಟ್ಟಿ ಸಲ್ಲಿಸಲಾಗಿದೆ.
ಮಕ್ಕಳ ರಕ್ಷಣಾ ಘಟಕ ಹಾಗೂ ಮಾಧ್ಯಮಗಳ ವಿಶೇಷ ಕಾಳಜಿ ಫಲವಾಗಿ ಬೆಳಕಿಗೆ ಬಂದ ಈ ಪ್ರಕರಣದಲ್ಲಿ ಸಂತ್ರಸ್ತೆ ಪ್ರಮುಖ ಆರೊಪಿಯಾಗಿರುವುದು ಗಂಭೀರ ವಿಚಾರ. ಶೃಂಗೇರಿಯ ಸುತ್ತಮುತ್ತಲಿನ ಪಡ್ಡೆ ಹುಡುಗರೇ ಅಧಿಕ ಸಂಖ್ಯೆಯಲ್ಲಿ ಲೈಂಗಿಕ ದೌರ್ಜನ್ಯದಲ್ಲಿ ಪಾಲ್ಗೊಂಡ ವಿಚಾರವೂ ತನಿಖೆಯಲ್ಲಿ ಹೊರಬಂದಿದೆ. ಅದರಲ್ಲೂ ಕೇಸರಿ ಪಡೆಯವರು ಎಂದೇ ಗುರುತಿಸಲಾದವರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣವನ್ನು ಒಂದು ಹಂತದಲ್ಲಿ ಹಿಂದೆ-ಮುಂದೆ ಮಾಡಲು ನೋಡಿದ ಶೃಂಗೇರಿ ಠಾಣೆಯ ವೃತ್ತ ನಿರೀಕ್ಷಕರ ನಡೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದರ ಸಂಬಂಧ ಕಾಂಗ್ರೆಸ್ ಪಕ್ಷ ತೀವ್ರ ಪ್ರತಿಭಟನೆ ಸಹ ನಡೆಸಿತ್ತು. ತನಿಖಾಧಿಕಾರಿಯಾಗಿದ್ದ ವೃತ್ತ ನಿರೀಕ್ಷಕರು ವರ್ಗಾವಣೆ ಶಿಕ್ಷೆಗೆ ಗುರಿಯಾದರು. ತನಿಖಾ ಹೊಣೆ ಹೊತ್ತ ಹೆಚ್ಚುವರಿ ರಕ್ಷಣಾಧಿಕಾರಿ ಶೃತಿ ತನಿಖೆಯನ್ನು ಶಿಸ್ತಿನಿಂದ ನಡೆಸಿದ್ದರು.
ಶೃತಿಯವರ ತನಿಖೆಯ ಫಲವಾಗಿ ಆರೋಪಿಗಳ ಅಸಲಿಯತ್ತು ಬಯಲಿಗೆ ಬಂತು. ಅಲ್ಲದೆ ಆರೋಪಿಗಳೆಲ್ಲರೂ ಕಂಬಿ ಎಣಿಸಲು ಸಾಧ್ಯವಾಯಿತು. ಇಲ್ಲಿಯವರೆಗೆ ೫೨ ಜನರನ್ನು ಬಂಧಿಸಲಾಗಿದ್ದು, ಪ್ರತಿಯೊಬ್ಬ ಆರೋಪಿಯ ವಿರುದ್ಧ ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಜಾಮೀನು ಪಡೆಯಲು ಹೈಕೋರ್ಟಿನಲ್ಲಿ ಆರೊಪಿಗಳ ಯತ್ನ ನಡೆದೇ ಇದೆ.
ಸದರಿ ಪ್ರಕರಣವನ್ನು ನ್ಯಾಯಾಲಯ ಶೀಘ್ರವೇ ಬಗೆಹರಿಸಿ, ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕಾಗಿದೆ. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತಹ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

























Discussion about this post