ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಅಂಗವಾಗಿ ಶ್ರೀ ಶಾರದಾಂಬಾ ರಥೋತ್ಸವ ಸಾಂಪ್ರದಾಯಿಕವಾಗಿ ನಡೆಯಿತು. ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಸೇರಿದಂತೆ ಉಳಿದ ವಿಶೇಷ ದಿನದಲ್ಲಿ ಶ್ರೀ ಶಾರದೆಯ ಸನ್ನಿಧಿಯ ಒಳ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ನಡೆಯುವುದು ಪದ್ದತಿಯಾಗಿದೆ.
ಆದರೆ ಈ ವರ್ಷ ಶರನ್ನವರಾತ್ರಿಯ ಆಶ್ವಯುಜ ಶುಕ್ಲ ಏಕಾದಶಿ ದಿನದಂದು ನಡೆಯುವ ಮಹಾರಥೋತ್ಸವದ ಅಂಗವಾಗಿ ಶಾರದಾ ದೇಗುಲದ ಹೊರ ಪ್ರಾಂಗಣದಲ್ಲಿ ರಥೋತ್ಸವವನ್ನು ಎಳೆಯಲಾಯಿತು.ಕೊರೊನ ಹಿನ್ನಲೆಯಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಮಹಾರಥೋತ್ಸವಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದರು.
ರಥೋತ್ಸವದಲ್ಲಿ ಸ್ಥಬ್ಧ ಚಿತ್ರಗಳು,ಜಾನಪದ ನೃತ್ಯ ತಂಡ ರಥೋತ್ಸವದ ಮೆರಗು ಹೆಚ್ಚಿಸುತ್ತಿದ್ದವು.ಸರಳವಾಗಿ ಶ್ರೀಮಠದ ಹೊರ ಆವರಣದಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ರಥೋತ್ಸವ ನಡೆಯಿತು.ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ರದ್ದುಗೊಳಿಸಲಾಗಿತ್ತು.
ನವರಾತ್ರಿಯ ಹತ್ತು ದಿನ ವಿವಿಧ ಅಲಂಕಾರಗಳಲ್ಲಿ ಕಂಗೊಳಿಸಿದ ಶಾರದೆಗೆ ಶನಿವಾರ ಗಜಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.ಬೆಳಗ್ಗೆ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ,ಮಹಾಮಂಗಳಾರತಿ ನಡೆಯಿತು.ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ರಥದ ಅಭಿಮುಖವಾಗಿ ನಡೆದರು.
ಉತ್ಸವ ಮೂರ್ತಿ ಎದುರು ಗಜಾಶ್ವ, ಛತ್ರಿ,ಚಾಮರ ವಾದ್ಯಮೇಳದೊಂದಿಗೆ ಉತ್ಸವ ನಡೆಸಲಾಯಿತು ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮಿಗಳು ಬೆಳಗಿನ ಆಹ್ನಿಕ ಕಾರ್ಯಕ್ರಮ ಮುಗಿಸಿ,ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದ ಪೂರ್ವ ಭಾವಿಯಾಗಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಗುರುಭವನದಲ್ಲಿ ಭಕ್ತರನ್ನು ಆಶೀರ್ವದಿಸಿ, ನಂತರ ಗಂಗಾ ಪೂಜೆ ನೆರವೇರಿಸಿ ಶ್ರೀ ಶಾರದಾ ದೇಗುಲಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಕಾರಿ ಡಾ.ವಿ.ಆರ್.ಗೌರೀಶಂಕರ್, ಶ್ರೀಮಠದ ಅಧಿಕಾರಿಗಳಾದ ಶ್ರೀಪಾದರಾವ್,ಶಿವಶಂಕರಭಟ್,ರಾಮಕೃಷ್ಣಯ್ಯ,ಗೋಪಾಲಕೃಷ್ಣ,ಹಾಜರಿದ್ದರು.ಸದ್ವಿದ್ಯಾ ಸಂಜೀವಿನಿ ಪಾಠಾಶಾಲೆಯ ವಿದ್ಯಾರ್ಥಿಗಳು ವೇದ ಘೋಷ ಮಾಡಿದರು.
ಶಾರದಾ ಸ್ವರ್ಣ ರಥೋತ್ಸವದ ನಂತರ ಶ್ರೀ ಶಾರದಾ ಸನ್ನಿಧಿಯಲ್ಲಿ ಹಗಲು ದರ್ಬಾರ್ ನಡೆಯಿತು.ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಸಿಂಹಾಸನದಲ್ಲಿ ಆಸೀನರಾಗಿ,ಭಕ್ತರನ್ನು ಆಶೀರ್ವದಿಸಿದರು.ಚತುರ್ವೇದ ಪಾರಾಯಣ,ವಾಲ್ಮಿಕಿ ರಾಮಾಯಣ,ದೇವಿ ಭಾಗವತ,ಶಂಕರ ದಿಗ್ವಿಜಯ ಪಾರಾಯಣಗಳು ನಡೆಯಿತು.ದೇವಿ ಸಪ್ತಶತಿ ಪಾರಾಯಣದ ಕೊನೆಯ ಅಧ್ಯಾಯವಾದ ೧೩ ನೇ ಅಧ್ಯಾಯವನ್ನು ಮಠದ ವಿದ್ವಾಂಸ ಶಿವಕುಮಾರಶರ್ಮ ವಾಚಿಸಿದರು. ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಉಪಸ್ಥಿತರಿದ್ದರು.

























Discussion about this post