ಚಿಕ್ಕಮಗಳೂರು: ನಗರದ ಪ್ರಸಿದ್ಧ ಸಂತ ಜೋಸೆಫರ ಎಜುಕೇಶನಲ್ ಸೊಸೈಟಿ ನಿವೇಶನ ಹಗರಣ ಕೋರ್ಟು ಮೆಟ್ಟಿಲೇರಿದ್ದು, ಸಮನ್ಸ್ ಜಾರಿಗೆ ನ್ಯಾಯಾಲಯ ಸೂಚಿಸಿದೆ. ಬಿಷಪ್ ಟಿ. ಅಂತೋಣಿ ಸ್ವಾಮಿ ಹಾಗೂ ಎ. ಕಾಂತರಾಜು ವಿರುದ್ಧ ಪ್ರಕರಣ ದಾಖಲಾಗಿದ್ದು, ಸಮನ್ಸ್ ಜಾರಿಗೊಳಿಸುವಂತೆ ಜಿಲ್ಲಾ ನ್ಯಾಯಾಲಯ ಸೂಚಿಸಿದೆ.
ದಾನಿಗಳು ನೀಡಿದ್ದ ನಿವೇಶನವನ್ನು ೬ ಬಿಡಿ ವಸತಿ ನಿವೇಶನ ಮಾಡಿಸಿಕೊಂಡು, ದಾಖಲೆ ತಿದ್ದಿ ಮಾರಾಟ ಸಹ ಮಾಡಲು ಮುಂದಾಗಿದ್ದ ಆರೋಪದ ಮೇಲೆ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ದೂರು ಸಲ್ಲಿಕೆ ಮಾಡಿದ್ದರು.ತನಿಖೆ ನಡೆಸಿದ್ದ ನಗರ ಠಾಣೆ ಪೊಲೀಸರು ನ್ಯಾಯಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು.
ನ್ಯಾಯಾಲಯವು ಬಿ ರಿಪೋರ್ಟ್ ತಳ್ಳಿಹಾಕಿದ್ದು, ವಿಶ್ವಾಸ ದ್ರೋಹ ಪ್ರಕರಣದಲ್ಲಿ ಐಪಿಸಿ ೪೦೬ರಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಜಾರಿಗೊಳಿಸಲು ನ್ಯಾಯಾಲಯ ಠಾಣಾ ಪೊಲೀಸರಿಗೆ ಆದೇಶ ನೀಡಿದೆ.
ಸುದ್ಧಿಗಾರರಿಗೆ ದೂರುದಾರ ಮೈಕಲ್ ಮಾಹಿತಿ ನೀಡಿದ್ದು, ಸರ್ಕಾರದ ಮಾರ್ಗಸೂಚಿಯಂತೆ ದಾನಿ ಎಫ್ ಜಿ ಎಚ್ ಫರ್ನಾಂಡಿಸ್ ೨೦ ಗುಂಟೆ ಜಾಗ ದಾನ ನೀಡಿದ್ದರು ಎಂದಿದ್ದಾರೆ.
ಹಾಸ್ಟೆಲ್ ಕಟ್ಟಡಕ್ಕಾಗಿ ನೀಡಿದ್ದ ಜಾಗ ನಿಯಮ ಬಾಹಿರವಾಗಿ ೬ ನಿವೇಶನವಾಗಿ ಪರಿವರ್ತಿಸಿ ಮಾರುಕಟ್ಟೆ ದರಕ್ಕಿಂತ ಕಡಿಮೆ ದರ ನಮೂದಿಸಿ ಶಿಕ್ಷಣ ಸಂಸ್ಥೆಗೆ ಸುಮಾರು ಹದಿನೈದು ಕೋಟಿ ರೂ. ನಷ್ಟ ಮಾಡಲು ಪ್ರಯತ್ನಿಸಿದ್ದರು ಎಂದು ಸಾಕ್ಷಿ ಸಮೇತ ವಿವರಿಸಿದ್ದಾರೆ.
ಖಾಸಗಿ ವ್ಯಕ್ತಿಗಳು ಆಮಿಷಕ್ಕೆ ಬಿದ್ದಿದ್ದು, ಬಿಷಪ್ , ಫಾದರ್ ಪರ ವಕಾಲತ್ತು ವಹಿಸುತ್ತಿರುವ ಸಂಶಯ ವ್ಯಕ್ತಪಡಿಸಿರುವ ಅವರು, ರೋಮ್ ರಾಯಭಾರಿಯಾಗಿ ಉನ್ನತಸ್ಥಾನದಲ್ಲಿರುವ ದೆಹಲಿ ಪ್ರತಿನಿಧಿಗಳು ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸದೇ ಇದ್ದುದರಿಂದ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಮಾಹಿತಿ ನೀಡಿದರು.

























Discussion about this post