ಚಿಕ್ಕಮಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗದವರು, ದೀನ-ದಲಿತರು, ಶೋಷಿತರು ಹಾಗೂ ಸರ್ವರ ಏಳಿಗೆಗಾಗಿ ಹಲವು ಸಮಾಜಮುಖಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದ ಧೀಮಂತ ನಾಯಕರಲ್ಲಿ ದೇವರಾಜ ಅರಸು ಪ್ರಮುಖರು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ದಿ. ಡಿ. ದೇವರಾಜ ಅರಸು ಅವರ ೧೦೬ ನೇ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಉಳುವವನೆ ಭೂಮಿಯ ಒಡೆಯ ಎಂಬ ಮಹತ್ವದ ಯೋಜನೆಯು ಶೋಷಿತ ಜನತೆಯು ಆರ್ಥಿಕವಾಗಿ ಸದೃಢರಾಗಲು ಹಾಗೂ ಬಡತನ, ಅಸಮಾನತೆ, ಶೋಷಣೆ ಸೇರಿದಂತೆ ಹಲವು ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ತರುವಲ್ಲಿ ಹಾಗೂ ಮನೆ ಮನೆಗಳಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದವರಲ್ಲಿ ಪ್ರಮುಖರಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹರಿಕಾರನಾಗಿ, ಎಲ್ಲಾ ತಳಸಮುದಾಯಗಳ ಅಭ್ಯುದಯಕ್ಕಾಗಿ ಉಳುವವನೆ ಭೂಮಿಯ ಒಡೆಯ, ಜೀತಪದ್ದತಿ ನಿರ್ಮೂಲನೆ, ಸೇರಿದಂತೆ ಹತ್ತು ಹಲವು ಆರ್ಥಿಕ, ಸಾಮಾಜಿಕ, ಸುಧಾರಣೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ಬದಲಾವಣೆಯ ಕ್ರಾಂತಿ ತಂದಂತಹ ಮಹಾನ್ ವ್ಯಕ್ತಿ ಎಂದು ಹೇಳಿದರು.
ರಾಜ್ಯದ ಮಹಿಳೆಯರು ಹಾಗೂ ಧೀನ-ದಲಿತರ, ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ವಸತಿ ಶಾಲೆಗಳ ನಿರ್ಮಾಣ, ಅಲ್ಪ ಸಂಖ್ಯಾತರ ವರ್ಗಕ್ಕೆ ಸೇರಿದ ಯುವಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದಂತಹ ಸಮಾಜಮುಖಿ ವ್ಯಕ್ತಿತ್ವವನ್ನು ಹೊಂದಿದಂತಹ ನಾಯಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್. ವೈ ಅವರು ಸದ್ಭಾವನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್, ಅಕ್ಷಯ್, ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಕಿಶೋರ್ ಕುಮಾರ್, ಮುಖಂಡರಾದ ಕೆ.ಟಿ ರಾಧಾಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























Discussion about this post