ಚಿಕ್ಕಮಗಳೂರು : ಕೇಂದ್ರ ಸರ್ಕಾರ ಘೋಷಿಸಿರುವ ಸೆ.೧೪ ರ ಹಿಂದಿ ದಿವಸ ಆಚರಣೆ ಸಪ್ತಾಹ ಜತೆಗೆ ಆಡಳಿತದಲ್ಲಿ ಹಿಂದಿ ಹೇರಿಕೆ ಖಂಡಿಸಿ ಕನ್ನಡ ಸೇನೆ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಅರೆಬೆತ್ತಲೆ ಮೆರವಣಿಗೆ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡ ಸೇನೆ ಚಿಕ್ಕಮಗಳೂರು ಘಟಕದ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಭಾರತವು ಬಹು ಸಂಸ್ಕೃತಿಯ ನಾಡಾಗಿದ್ದು ನೂರಾರು ಭಾಷೆ ನೂರಾರು ಭವ್ಯ ಸಂಸ್ಕೃತಿಗಳ ತಾಣವಾಗಿದೆ.ಆದರೆ ಕೇಂದ್ರ ಸರ್ಕಾರವು ಹಿಂದಿಯನ್ನು ಹೇರುವ ಮೂಲಕ ಪ್ರಾದೇಶಿಕ ಶ್ರೀಮಂತ ಭಾಷೆಗಳನ್ನು ಮೂಲೆಗುಂಪು ಮಾಡುವ ಪ್ರಯತ್ನ ಮಾಡುತ್ತಿದೆ. ಆಡಳಿತದಲ್ಲಿ ಬಲವಂತವಾಗಿ ಹಿಂದಿ ಮತ್ತು ಆಂಗ್ಲ ಭಾಷೆಗಳನ್ನು ಅಳವಡಿಸುವ ಮೂಲಕ ಆಡಳಿತವನ್ನು ಇನ್ನೂ ಕಗ್ಗಂಟು ಮಾಡುತ್ತಿದೆ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ಕನ್ನಡಿಗನ ಸಾರ್ವಭೌಮತೆಯನ್ನು ಕಸಿಯುವ ಷಡ್ಯಂತ್ರವನ್ನು ಪರೋಕ್ಷವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿವೆ. ತಮ್ಮ ದೈನಂದಿನ ಸರ್ಕಾರಿ ವ್ಯವಹಾರಗಳಿಗಾಗಿ ಪರಕೀಯರ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ದೇಶದ ಅತಿ ಹೆಚ್ಚು ತೆರಿಗೆ ಪಾವತಿಸುವ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದ್ದು ಹೀಗಿದ್ದೂ ನಮ್ಮದೇ ತೆರಿಗೆ ಹಣದಲ್ಲಿ ನಡೆಯುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಸರ್ಕಾರದ ನಡೆಯನ್ನು ಖಂಡಿಸಿದರು.
ಭಾರತ ಬಹುಭಾಷೆ, ಬಹುಸಂಸ್ಕೃತಿಗಳ ನಾಡು. ಬಹುತ್ವ ಉಳಿದರಷ್ಟೆ ಒಕ್ಕೂಟ ಉಳಿಯಲು ಸಾಧ್ಯ. ಹಿಂದಿ ಭಾಷೆಯೊಂದಕ್ಕೆ ಮಾತ್ರ ಉಳಿದ ಭಾಷೆಗಳಿಗಿಂತ ಮೇಲಿನ ಸ್ಥಾನ ನೀಡಿ ಸಾಂವಿಧಾನಿಕ ಸಂಸ್ಥೆಗಳ ಮೂಲಕ ಎಲ್ಲಾ ಹಿಂದಿಯೇತರ ಜನಗಳ ಮೇಲೆ ಹೇರಿಕೆ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಹಿಂದಿ ದಿನಾಚರಣೆ ಕೊನೆಯಾಗಬೇಕು. ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ನೀಡುವುದಾಗಲಿ, ಯಾವ ಭಾಷೆಯನ್ನೂ ನಿರ್ಲಕ್ಷಿಸುವುದಾಗಲೀ ಮಾಡಬಾರದು. ಸಂವಿಧಾನಕ್ಕೆ ತಿದ್ದುಪಡಿ ತಂದು ಎಲ್ಲಾ ೨೨ ಭಾಷೆಗಳನ್ನು ರಾಷ್ಟ್ರ ಭಾಷೆಗಳನ್ನಾಗಿ ಮಾಡಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ, ಎಲ್ಲಾ ಭಾಷೆಗಳಿಗೂ ಸಮಾನ ಹಕ್ಕುಗಳು ದೊರೆಯಬೇಕೆಂದು ಒತ್ತಾಯಿಸಿದರು.
ಹಿಂದಿ ಹೇರಿಕೆಯ ಪರಿಣಾಮವಾಗಿ ಕೇಂದ್ರ ಸರ್ಕಾರದ ಉದ್ಯೋಗಗಳು ಹಿಂದಿ ಭಾಷಿಕರ ಪಾಲಾಗುತ್ತಿವೆ. ಕನ್ನಡದ ಮಕ್ಕಳು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ಕರ್ನಾಟಕಕ್ಕೆ ಉತ್ತರದ ರಾಜ್ಯಗಳಿಂದ ವಲಸೆ ವಿಪರೀತವಾಗಿದ್ದು, ಕನ್ನಡಿಗರ ಅಸ್ಮಿತೆ, ಸಂಸ್ಕೃತಿ, ಪರಂಪರೆ ಮತ್ತು ಬದುಕು ಅಪಾಯಕ್ಕೆ ಸಿಲುಕಿದೆ. ತಂತ್ರಜ್ಞಾನ ಮುಂದುವರೆದಿರುವುದರಿAದ ಭಾರತದಲ್ಲಿ ಬಹುಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಹೊಂದುವುದಕ್ಕೆ ಅವಕಾಶವಿದೆ ಎಂದರು.
ದೇಶದ ಸಂವಿಧಾನದAತೆ ಗುರುತಿಸಿರುವ ಎಲ್ಲಾ ಭಾಷೆಗಳು ರಾಷ್ಟ್ರಭಾಷೆ ಆಗಿರುವುದರಿಂದ ಕೇಂದ್ರ ಸರ್ಕಾರ ಹಿಂದಿಯನ್ನು ಆಡಳಿತಾತ್ಮಕ ಭಾಷೆಯಾಗಿ ಹೇರಿಕೆ ಮಾಡುವುದು ಸರಿಯಲ್ಲ ಕೇಂದ್ರ ಸರ್ಕಾರದ ಒತ್ತಾಯ ಪೂರ್ವಕ ಹಿಂದಿ ಹೇರಿಕೆ ನಿಲ್ಲಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಬದಿಗೆ ತಳ್ಳಿ, ಹಿಂದಿ ಭಾಷೆ ಮುನ್ನಲೆಗೆ ಬರಲು ಸಾಧ್ಯವೇ ಇಲ್ಲ. ನಮ್ಮ ದೇಶ ಹಲವು ಭಾಷೆ, ಸಂಸ್ಕೃತಿ, ಧರ್ಮಗಳಿಂದ ತುಂಬಿಕೊAಡಿರುವ, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ರಾಷ್ಟ್ರ. ಹೀಗಿರುವಾಗ ಹಿಂದಿ ಸಾರ್ವಭೌಮ ಭಾಷೆಯಾಗಲು ಸಾಧ್ಯವಿಲ್ಲ ಒಂದು ವೇಳೆ ಬಲವಂತವಾಗಿ ಹಿಂದಿಯನ್ನು ಕನ್ನಡಿಗರ ಮೇಲೆ ಹೇರಿದಲ್ಲಿ ಉಗ್ರವಾದ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕನ್ನಡ ನಮ್ಮ ಅಸ್ಮಿತೆ, ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ, ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕ ವಿಷಯವಾಗಿರಬೇಕೇ ಹೊರತು ಕಡ್ಡಾಯವಾಗಬಾರದು, ಇದು ಮಗುವಿನ ಕಲಿಕೆಯ ಶಕ್ತಿ ಕುಂಠಿತಗೊಳಿಸುವುದಾಗಿದೆ. ಹಿಂದಿ ಹೇರಿಕೆ ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದ್ದು, ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಬೇಕು. ಹೊಸ ಶಿಕ್ಷಣ ನೀತಿ ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗಿದೆ, ಬಲವಂತವಾಗಿ ಹಿಂದಿ ಹೇರುವುದು ಏಕಪಕ್ಷೀಯ ನಿರ್ಧಾರವಾಗಲಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆಯ ಪದಾಧಿಕಾರಿಗಳಾದ ಜಯಪ್ರಕಾಶ್, ಕಳವಾಸೆ ರವಿ, ಯೋಗೇಶ್, ಜಗದೀಶ್ ಮರಬೈಲ್. ಶಂಕರೇಗೌಡ, ರವಿಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

























Discussion about this post