ಬೆಂಗಳೂರು : ಕಚ್ಛಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ ಎಂಬ ನೆಪ ಹೇಳಿ ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿರುವ ಕೇಂದ್ರ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ದ ಕೆಂಡ ಕಾರಿದರು.
ಕೇಂದ್ರದ ಬೆಲೆ ಏರಿಕೆ ನೀತಿ ಖಂಡಿಸಿ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಎತ್ತಿನ ಗಾಡಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎಷ್ಟು ಇತ್ತು. ಈಗ ಎಷ್ಟು ಇದೆ ಎಂಬುದನ್ನು ನೀವುಗಳೇ ಪರಿಶೀಲಿಸಬೇಕು.
ತೆರಿಗೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಜ ಹೇಳಲಿ. ಸತ್ಯವನ್ನೇಕೆ ಅವರು ಮುಚ್ಚಿಡಬೇಕು. ಜನರ ಮುಂದೆ ನಿಜಾಂಶ ವಿವರಿಸಲಿ ಎಂದು ಒತ್ತಾಯಿಸಿದರು.
ಪೆಟ್ರೋಲ್ ದರ ಈಗ ಲೀಟರ್ ಗೆ 106 ರೂ., ಡೀಸೆಲ್ ಬೆಲೆ 100 ರೂ.ಗಳ ವರೆಗೆ ಹೋಗಿದೆ. ಅಡುಗೆ ಅನಿಲ ದರ 900 ರೂ. ಆಗಿದೆ. ವಾಜಪೇಯಿ ಅವರು 1973ರಲ್ಲಿ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಯಲ್ಲಿ ಸಂಸತ್ತಿಗೆ ಬಂದಿರಲಿಲ್ಲವೇ ? ಆಗ ಪ್ರತಿಭಟನೆ ಮಾಡಿದವರುಬಿಜೆಪಿಯವರಲ್ಲವೇ ? ಕಾಂಗ್ರೆಸ್ ಪ್ರತಿಭಟನೆ ವಿರೋಧಿಸಿರುವ ಮುಖ್ಯಮಂತ್ರಿ ಹಾಗೂ ಬಿಜೆಪಿಯವರು ಇತಿಹಾಸ ಓದಿಕೊಳ್ಳಬೇಕು.
ಆಗ ವಾಜಪೇಯಿಯವರು ಏಕೆ ಪ್ರತಿಭಟನೆ ಮಾಡಿದ್ದರು. ಜನ ಬೀದಿಗೆ ಏಕೆ ಇಳಿದಿದ್ದರು ಎಂಬುದನ್ನು ಸ್ಮರಿಸಿಕೊಳ್ಳಲಿ ಎಂದು ಸವಾಲು ಹಾಕಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ತೈಲ ದರ ಸ್ವಲ್ಪ ಬೆಲೆ ಏರಿಕೆಯಾದಾಗ ಶೋಭಾ ಕರಂದ್ಲಾಜೆಯವರು ಹಾಗೂ ಬಿಜೆಪಿ ನಾಯಕರು ತಲೆಯ ಮೇಲೆ ಸಿಲಿಂಡರ್ ಹೊತ್ತು ಧರಣಿ ಮಾಡಿರಲಿಲ್ಲವೇ ?
ಜನರಿಗೆ ಅನ್ಯಾಯವಾಗಿದೆ ಎಂದು ಅವರು ಹೋರಾಟ ಮಾಡಿದ್ದರು. ಈಗ ಅವರು ಮಂತ್ರಿಯಾಗಿದ್ದಾರೆ ಎಂದು ಜನ ಬೆಲೆ ಏರಿಕೆಯನ್ಬು ಸಹಿಸಿಕೊಳ್ಳಬೇಕೆ ? ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ಅಗ್ರಹಿಸಿದರು.
ತಮಿಳುನಾಡಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಅಲ್ಲಿಯ ಮುಖ್ಯಮಂತ್ರಿ ಕಡಿಮೆ ಮಾಡಿದ್ದಾರೆ. ರಾಜ್ಯದಲ್ಲಿ ಬೊಮ್ಮಾಯಿ ಅವರು ಸಹ ತೆರಿಗೆ ಕಡಿತಗೊಳಿಸಲಿ. ಬೆಲೆ ಏರಿಕೆ ಬಗ್ಗೆ ಸದನದಲ್ಲಿ ನಾಳೆ ನಿಲುವಳಿ ಸೂಚನೆ ಮಂಡಿಸುತ್ತೇವೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ನಾನು ನಮ್ಮ ರಾಜ್ಯದ ಬಗ್ಗೆ ಕಾಳಜಿಯಿಂದ ಮಾತನಾಡುತ್ತೇನೆ. ಸಾಮಾಜಿಕ ಜಾಲ ತಾಣಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರವನ್ನು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದನ್ನೂ ಬಿಜೆಪಿಯವರು ಗಮನಿಸುವುದು ಒಳ್ಳೆಯದು ಎಂದರು.
ಮನಮೋಹನಸಿಂಗ್ ಅವರು ಪ್ರಧಾನಿ ಆಗಿದ್ದಾಗ ಡೀಸೆಲ್ ಮೇಲಿನ ತೆರಿಗೆ 3.45 ರೂ. ಇತ್ತು. ಈಗ 31.74 ರೂ. ಆಗಿದೆ. ಅದೇ ರೀತಿ ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆ 9.21 ರೂ.ಗಳಿಂದ 32.98 ರೂ.ಗಳಿಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆ ಆಗದಿದ್ದರೂ ಪೆಟ್ರೋಲ್, ಡಿಸೇಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನರನ್ನು ವಂಚಿಸುತ್ತಿದೆ ಎಂದು ಸಿದ್ದರಾಮಯ್ಯ ಅವರು ದೂರಿದರು.

























Discussion about this post