ಬೆಂಗಳೂರು: ಇನ್ಮುಂದೆ ವಾಹನ ಚಾಲನೆ ಮಾಡುವ ವೇಳೆ ಫೋನ್ ಜತೆಗೆ ಬ್ಲ್ಯೂಟೂತ್, ಹೆಡ್ ಫೋನ್ ಬಳಸುವುದು ಕಾನೂನು ಬಾಹಿರವಾಗಿದ್ದು, ಸಿಕ್ಕಿಬಿದ್ದರೆ ಅಂತಹವರಿಗೆ ಸಂಚಾರ ಪೊಲೀಸರಿಂದ 1000 ರೂ. ದಂಡ ಬೀಳಲಿದೆ.
ಹೆಡ್ ಫೋನ್ ಅಥವಾ ಇಯರ್ ಫೋನ್ ಧರಿಸಿ ವಾಹನ ಚಾಲನೆ ಮಾಡಿದರೆ ಅಂತಹವರನ್ನು ಸಂಚಾರಿ ನಿಯಮ ಉಲ್ಲಂಘನೆ ಅಡಿ ಸೇರಿಸಿ, ದಂಡ ವಿಧಿಸಿ ರಶೀದಿ ನೀಡಲಾಗುವುದು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಫೋನ್ ಜೇಬಿನಲ್ಲಿಟ್ಟುಕೊಂಡು ಬ್ಲ್ಯೂಟೂತ್ ಅಥವಾ ಇಯರ್ ಫೋನ್ ಡಿವೈಸ್ ಮೂಲಕ ಮಾತನಾಡುವುದು ಕೂಡ ನಿಯಮ ಉಲ್ಲಂಘನೆಯಾಗಲಿದೆ. ಕಾನೂನಿನ ಪ್ರಕಾರ ವಾಹನಗಳನ್ನು ಚಲಾಯಿಸುವಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಉಪಯೋಗಿಸುವುದು ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ.
ವಾಹನಗಳಲ್ಲಿ ಚಲಿಸುವಾಗ ಟ್ರಾಫಿಕ್‍ನಲ್ಲಿ ರೆಡ್ ಸಿಗ್ನಲ್ ಬಿದ್ದಾಗ ಕೂಡ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ.
ಮೊಬೈಲ್ ಬಳಕೆಯಿಂದ ಅಕ್ಕಪಕ್ಕದ ವಾಹನ ಸವಾರರಿಗೆ ತೊಂದರೆಯಾಗಲಿದೆ ಎಂಬುದು ಕಾನೂನಿನ ವಾದವಾಗಿದೆ. ಅದೇ ರೀತಿ ಕಾರು ಚಾಲಕರು ಆಧುನಿಕ ಸಾಧನಗಳನ್ನು ಬಳಸಿ ಸಿಗ್ನಲ್‌ನಲ್ಲಿ ಲೌಡ್ ಸ್ಪೀಕರ್ ಹಾಕಿ ಮಾತನಾಡುವುದು ಕೂಡ ಕಾನೂನು ಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲನೆ ವೇಳೆ ಹೆಡ್ ಫೋನ್ ಅಥವಾ ಬ್ಲ್ಯೂಟೂತ್ ಡಿವೈಸ್ ಮೂಲಕ ಮ್ಯೂಸಿಕ್ ಕೇಳುವುದು, ಕೈಯಲ್ಲಿ ಮೊಬೈಲ್ ಹಿಡಿದು ಗೂಗಲ್ ಮ್ಯಾಪ್ ನೋಡುವುದು ಸಂಚಾರ ನಿಯಮ ಉಲ್ಲಂಘನೆಯಾಗಲಿದೆ. ಹಾಗಾಗಿ, ಬೈಕ್ ಅಥವಾ ಕಾರುಗಳಲ್ಲಿ ಫೋನ್ ಹೋಲ್ಡರ್ ಅಳವಡಿಸಿ ಮ್ಯಾಪ್ ವೀಕ್ಷಿಸಲು ಅವಕಾಶವಿದೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ.

























Discussion about this post