ಶಿವಮೊಗ್ಗ: ನಿನ್ನೆ ರಾತ್ರಿ 2 ಗಂಟೆಯ ವೇಳೆಯಲ್ಲಿ ತೀರ್ಥಹಳ್ಳಿ ಪಟ್ಟಣದ ಬಾಳೆಬೈಲಿನಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷರ ಮನೆ ಎದುರು ಮಲಗಿದ್ದ ದನಗಳನ್ನು ವಿಕೃತವಾಗಿ ಕಾರಿನಲ್ಲಿ ತುಂಬಿಕೊಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾದ ಘಟನೆ ನಡೆದಿದೆ.
ಹಳ್ಳಿಗರಿಗೆ ಎತ್ತು-ದನಗಳ ಕಳವಿನಿಂದ ಸಾಕಷ್ಟು ನಷ್ಟ ಸಂಭವಿಸುತ್ತಲೇ ಇದ್ದು, ಗ್ರಾಮೀಣ ಭಾಗಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಹೊಲದ ಬೇಸಾಯಕ್ಕೆ, ಐನುಗಾರಿಕೆಗಾಗಿ ಸಾಕಿದ ದನಗಳನ್ನು ತಮ್ಮ ಕಣ್ಣೆದುರೇ ಕದ್ದು ಪರಾರಿಯಾಗುತ್ತಿದ್ದರು ಏನೂ ಮಾಡಲಾಗದಂತಹ ಅಸಹಾಯಕ ಸ್ಥಿತಿಯಲ್ಲಿ ಜನ ತಲುಪಿದ್ದಾರೆ.
2 ವರ್ಷದಲ್ಲಿ 200 ಕ್ಕೂ ಹೆಚ್ಚು ಪ್ರಕರಣಗಳು ತೀರ್ಥಹಳ್ಳಿಯಲ್ಲಿ ದಾಖಲಾಗಿದ್ದರು ಇದುವರೆಗೂ ಒಬ್ಬ ಕಳ್ಳನೂ ಸಿಕ್ಕಿಲ್ಲ.
ಗೃಹಮಂತ್ರಿ ಆರಗ ಜ್ಞಾನೇಂದ್ರರವರು ದನಗಳ್ಳರ ಹಾವಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಸೂಚಿಸಿದ್ದರೂ ಸಹ ಅವರನ್ನು ಹಿಡಿಯಲು ಸಾಧ್ಯವಾಗದೇ ಇರುವುದು ವಿಷಾದನೀಯ ಸಂಗತಿ ಎಂದು ಜಾನುವಾರು ಕಳಕೊಂಡವರು ಬೇಸರದಿಂದ ಮಾತನಾಡಿದರು.
ರಾಜ್ಯದಲ್ಲಿ ಗೋ ಹತ್ಯೆಯ ವಿರುದ್ಧ ಹಾಗೂ ಗೋವುಗಳ ಅಕ್ರಮ ಸಾಗಾಟದ ವಿರುದ್ಧ ಹಲವಾರು ಕಾನೂನುಗಳು ಜಾರಿಯಲ್ಲಿದೆ ಆದರೂ ರಾಜಾರೋಷವಾಗಿ ಅಕ್ರಮ ಸಾಗಾಣಿಕೆ ನಡೆದೇ ಸಾಗಿದೆ.
ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇನ್ನೋವಾ ಕಾರ್ ಡಿಕ್ಕಿಯಲ್ಲಿ ಹಸು ಸಾಗಿಸಿದ ಒಂದು ಪ್ರಕರಣ ಮತ್ತು ಮಲಗಿದ್ದ ಜಾನುವಾರುಗಳನ್ನು ಕದ್ದು ಸಾಗಾಣಿಕೆ ಮಾಡುತ್ತಿದ್ದ ಎರಡು ಪ್ರಕರಣಗಳ ವರದಿಯನ್ನು ಕನ್ನಡನಾಡಿ ಪ್ರಕಟಿಸಿತ್ತು.
ಇನ್ನೂ ನಿಲ್ಲದ ಈ ದನದ ಮಾಂಸ ದಂಧೆಗೆ ಸಾಕಿದ ದನಗಳನ್ನು ಕದ್ದೊಯ್ದವರಿಗೆ ಶಿಕ್ಷೆ ಆಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗೊತ್ತಿದ್ದವರೇ ಕಮೀಷನ್ ಗಾಗಿ ಜಾನುವಾರು ಕಳ್ಳರಿಗೆ ಮಾಹಿತಿ ನೀಡುತ್ತಿರಬಹುದು ಎಂಬ ಅನುಮಾನ ಸಹ ಕೆಲವರು ವ್ಯಕ್ತಪಡಿಸಿದ್ದಾರೆ. ಇಲ್ಲದಿದ್ದರೆ ಜಾನುವಾರುಗಳ ಪಕ್ಕಾ ಮಾಹಿತಿ ಹೇಗೆ ಸಿಗುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

























Discussion about this post