ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಶಾಸಕ ಸಿ.ಟಿ ರವಿ ಅವರು ಕೀಳು ಮಟ್ಟದ ಭಾಷೆ ಬಳಸಿ ಟ್ವೀಟ್ ಮೂಲಕ ಸಮಾಜವನ್ನು ನಿಂದಿಸಿದ್ದಾರೆ ಕೂಡಲೇ ಬಹಿರಂಗ ಕ್ಷಮೆ ಯಾಚನೆ ಮಾಡಬೇಕು ಎಂದು ಒತ್ತಾಯಿಸಿ ಕುರುಬ ಸಮಾಜ ಮಂಗಳವಾರ ಬೆಳಗ್ಗೆ 10.30 ಕ್ಕೆ ಪ್ರತಿಭಟನೆ ಹಮ್ಮಿಕೊಂಡಿದೆ.
ನಗರದ ಹನುಮಂತಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿ ಆಜಾದ್ ಪಾರ್ಕ್ ವೃತ್ತದ ಎದುರು ಸಮಾಜದ ಮುಖಂಡರು ಸಮಾವೇಶಗೊಳ್ಳಲಿದೆ. ಈ ಸಂಬಂಧ ರಾಜ್ಯ ಕುರುಬರ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾಹುಲಿಯಪ್ಪ ಗೌಡ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ‘ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಎನ್ನುವ ನಿಮ್ಮ ವಾದದ ಪ್ರಕಾರ ಮುಸ್ಲಿಂ ಟೋಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?”ಎಂದು ಅತಿ ಕೀಳುಮಟ್ಟದ ಭಾಷೆ ಬಳಸಿ ನಿಂದಿಸಿರುವ ಪೋಸ್ಟ್ ಖಂಡನೀಯವಾದುದು ಇದು ಅವರ ಸಂಸ್ಕಾರವನ್ನು ಬಿಂಬಿಸುತ್ತದೆ ಎಂದು ಟೀಕಿಸಿದರು.
ಶಾಸಕರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲು ಜಿಲ್ಲೆಯ ಬಿಜೆಪಿ ಕೆಲ ಹಿಂಬಾಲಕರು ಮುಂದಾಗಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಅಂತಾ ಹೇಳಿಕೆ ನೀಡುತ್ತಾರೆ ಆದರೆ, ಅವರು ಸಂಪೂರ್ಣ ಕೆಸರಾಗಿದ್ದು ಮೊಸರು ಹುಡುಕಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಅವರ ಹೇಳಿಕೆ ಕುರುಬ ಸಮಾಜಕ್ಕೆ ಮಾತ್ರವಲ್ಲದೇ ಮುಸಲ್ಮಾನ ಸಮುದಾಯಕ್ಕೂ ಮಾಡಿದ ಅಪಮಾನ. ಸಿದ್ದರಾಮಯ್ಯ ಕುರುಬ ಸಮಾದಲ್ಲಿ ಹುಟ್ಟಿದ್ದರೂ ಸರ್ವ ಜನಾಂಗವನ್ನು ಸಮಾನ ರೀತಿಯಲ್ಲಿ ಕಂಡವರು, ಎಲ್ಲರ ಏಳಿಗೆಗೆ ಶ್ರಮಿಸಿ ಸಮರ್ಥ ಆಡಳಿತ ನೀಡಿದವರು ಕೂಡಲೇ ಹೇಳಿಕೆ ಹಿಂಪಡೆದು ಸಮಾಜವನ್ನು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಕಾರ್ಯಕ್ರಮಗಳಲ್ಲಿ ಅವರನ್ನು ಗೌರವಿಸಲು ಅವರ ಸಂಸ್ಕೃತಿಗೆ ತಕ್ಕಂತೆ ಉಡುಗೆ-ತೊಡುಗೆ ಧರಿಸುವುದು ಸಾಮಾನ್ಯ. ವಿವಿಧ ಸಮಾಜದ ಹಬ್ಬಗಳಲ್ಲಿ ಬಿಜೆಪಿ ನಾಯಕರು ಉಡುಗೆ, ವೇಷ, ಟೋಪಿಗಳನ್ನು ಧರಿಸಿದ್ದಾರೆ ಹಾಗಿದ್ದಲ್ಲಿ ಅವರು ಯಾರಿಗೆ ಹುಟ್ಟಿದವರು ಎನ್ನಬೇಕು ಎಂದು ಟೀಕಿಸಿದರು.
ಹಾಲು ಮತ ಸಮಾಜದ ಜಿಲ್ಲಾಧ್ಯಕ್ಷ ಮೂರ್ತಿ ಅಡವೇಗೌಡ ಮಾತನಾಡಿ ಸಿದ್ದರಾಮಯ್ಯರನ್ನು ಅಪಮಾನ ಮಾಡುವ ದುರುದ್ದೇಶದಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ. ಶಾಸಕರು ಸಮಾಜಕ್ಕೆ ಮಾಡಿದ ಅಪಮಾನ ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮಾಜದಿಂದ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಕುರುಬ ಸಂಘದ ನಿರ್ದೇಶಕ ವಕೀಲ ಪುಟ್ಟೇಗೌಡ, ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಚಂದ್ರಪ್ಪ, ಮಲ್ಲೇಗೌಡ, ನಾಗೇಶ್, ಸೋಮಶೇಖರ್ ಮತ್ತಿತರರು ಇದ್ದರು.
Discussion about this post