ಬೆಂಗಳೂರು: ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರ ಕೈಬಿಟ್ಟು ಸರ್ಕಾರದ ಸ್ವಾಮ್ಯದಲ್ಲೇ ಉಳಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸದನದಲ್ಲಿ ಆಗ್ರಹಿಸಿದರು.
ಈ ಕಾರ್ಖಾನೆ ಜೊತೆ ಮಂಡ್ಯ ಜಿಲ್ಲಯ ಜನರ ಭಾವನಾತ್ಮಕ ಸಂಬಂಧ ಇದೆ. ಅವರ ಭಾವನೆಗೆ ಸರ್ಕಾರ ಬೆಲೆ ಕೊಡಬೇಕು ಎಂದು ಅರ್ಧ ಗಂಟೆಯ ಕಾಲಾವಧಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಖಾನೆ ಖಾಸಗೀಕರಣ ಬೇಡ ಎಂಬುದು ಜಿಲ್ಲೆಯ ಜನರ ಒಕ್ಕೊರಲ ಅಭಿಪ್ರಾಯವಾಗಿದೆ. ಈ ಬಗ್ಗೆ ಮಂಡ್ಯ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಸಹ ಹೋರಾಟ ನಡೆಸುತ್ತಿದೆ. 1933 ರಲ್ಲಿ ಮೈಸೂರು ಮಹಾರಾಜರು ಆರಂಭಿಸಿದ ಕಾರ್ಖಾನೆ. ಹೀಗಾಗಿ ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರಿಯಬೇಕೆಂದು ಹೇಳಿದರು.
ಈಗಾಗಲೇ ನನ್ನ ಬಳಿಯೂ ಮಂಡ್ಯದ ಹಲವು ರೈತ ಮುಖಂಡರು ಬಂದು ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ.
ಮೊದಲು ಲಾಭದಲ್ಲಿದ್ದ ಕಾರ್ಖಾನೆ ಈಗ ನಷ್ಟದಲ್ಲಿರಲೂಬಹುದು. ಕಾರ್ಖಾನೆಯನ್ನು ಮುಂದುವರೆಸಬೇಕೆಂದು ನಾನು ಮುಖ್ಯಮಂತ್ರಿಯಾಗಿದ್ದಾಗ ರೂ.145 ಕೋಟಿ ನೀಡಿದ್ದೆ. ಒಟ್ಟು 235 ಎಕರೆ ಕಾರ್ಖಾನೆಗೆ ಸಂಬಂಧಿಸಿದ ಜಮೀನಿದೆ. ಈ ಜಮೀನನ್ನು ಅಭಿವೃದ್ಧಿ ಪಡಿಸಿ, ಅದರಿಂದ ಉತ್ಪತ್ತಿ ಬರುವಂತೆ ಮಾಡಿದರೆ ಸಕ್ಕರೆ ಕಾರ್ಖಾನೆ ನಡೆಸಲು ಅನುಕೂಲವಾಗುತ್ತೆ ಎಂದು ಸಮಜಾಯಿಶಿ ನೀಡಿದರು ಸಿದ್ದರಾಮಯ್ಯ.
ಕಾರ್ಖಾನೆಗೆ ಸಂಬಂಧಿಸಿದ ರವೀಂದ್ರ ಕಲಾಕ್ಷೇತ್ರದ ಎದುರಿರುವ ಒಂದು ಎಕರೆ ಜಾಗವನ್ನು ಅಭಿವೃದ್ಧಿ ಪಡಿಸಿ ಲಾಭ ಗಳಿಸಬಹುದು. ಇದಲ್ಲವನ್ನೂ ಸರ್ಕಾರ ಮನಸು ಮಾಡಿ ಮಾಡಿದರೆ ಕಾರ್ಖಾನೆಯನ್ನು ಲಾಭದಾಯಕವಾಗಿಸಬಹುದು ಎಂಬ ಅಭಿಪ್ರಾಯ ಮಂಡಿಸಿದರು.
ಕೊ ಜನರೇಷನ್ ಮತ್ತು ಡಿಸ್ಟಲರಿ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಲು ಅವಕಾಶವಿದೆ. ಈ ಕಾರ್ಖಾನೆ ಹಿಂದೆ 9.5 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರಿಯುತ್ತಿತ್ತು. ಈಗ ಅದೇ ಯಂತ್ರಗಳ ಮೂಲಕ ಕಬ್ಬು ಅರಿಯಲು ಕಷ್ಟವಾಗಿರೋದರಿಂದ ಆಧುನಿಕ ಯಂತ್ರಗಳನ್ನು ಅಳವಡಿಸಿ, ಕಾರ್ಖಾನೆಯ ಪುನರುಜ್ಜೀವನ ಮಾಡಬಹುದು ಜೊತೆಗೆ ಖಂಡಿತಾ ಲಾಭ ಗಳಿಸಬಹುದಾದ ಅವಕಾಶವಿದೆ ಎಂದೂ ಸಹ ವಿವರಣೆ ನೀಡಿದರು.
ಭಾವನಾತ್ಮಕ ಸಂಬಂಧ ಇರುವ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೋದರೆ ಅಲ್ಲಿನ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆಗಳು ಇದೆ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಹಾಗಾಗಿ ಸರ್ಕಾರ ಖಾಸಗೀಕರಣ ನಿರ್ಧಾರದಿಂದ ಹಿಂದೆಸರಿದು, ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಂಡು ಅದನ್ನು ಲಾಭದಾಯಕವಾಗಿಸುವತ್ತ ಗಮನ ಹರಿಸಬೇಕು ಎಂದು ವಿಪಕ್ಷ ನಾಯಕ ಒತ್ತಾಯಿಸಿದರು

























Discussion about this post