ಬೆಂಗಳೂರು: ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ಹಮ್ಮಿಕೊಂಡಿದ್ದು ಸುಮಾರು ಹತ್ತು ಲಕ್ಷ ಲಸಿಕೆ ನೀಡಲಾಗುವುದು ಎಂದು ಸುಧಾಕರ್ ಹೇಳಿದರು. ಲಸಿಕೆ ನೀಡಿಕೆ ಕುರಿತಂತೆ ಸೋಮವಾರ ಅಧಿಕಾರಿಗಳೊಂದಿಗೆ ನಡೆಸಿದ ಮಹತ್ವದ ಸಭೆಯ ನಂತರ ಆರೋಗ್ಯ ಸಚಿವ ಸುಧಾಕರ್ ಸುದ್ಧಿಗಾರರೊಂದಿಗೆ ಮಾತನಾಡಿದರು.
ಆಗಸ್ಟ್ ನಲ್ಲಿ ೧.೧೦ ಕೋಟಿ ಲಸಿಕ್ಯನ್ನು ಕೇಂದ್ರ ಕಳಿಸಿದ್ದು, ಸಿಎಂ ನೊಂದಿಗೆ ಕೇಂದ್ರ ಮಟ್ಟದಲ್ಲಿ ಚರ್ಚಿಸಿದ ನಂತರ ಪೂರೈಕೆ ಹೆಚ್ಚಾಗಿದೆ ಎಂದರು. ವಾರಕ್ಕೊಮ್ಮೆ ಲಸಿಕಾ ಉತ್ಸವ ನಡೆಸಿ, ಲಸಿಕೆ ನೀಡಿಕೆಯನ್ನು ೫-೧೦ಲಕ್ಷಕ್ಕೆ ಹೆಚ್ಚಿಸಲಾಗುವುದು.
ಈಗ ಲಭ್ಯವಾಗುತ್ತಿರುವ ಲಸಿಕೆ ಪ್ರಮಾಣವೇ ಮುಂದುವರೆದರೆ, ೧.೫-೨ಕೋಟಿ ಲಸಿಕೆಯನ್ನು ಒಂದು ತಿಂಗಳಲ್ಲಿ ನೀಡಬಹುದಾಗಿದೆ. ದೇಶದಲ್ಲೇ ಬೆಂಗಳೂರು ಲಸಿಕೆ ಪೂರ್ಣಗೊಳಿಸಿದ ನಗರ ಆಗಬೇಕು ಎಂಬ ಗುರಿ ಹೊಂದಿರುವುದಾಗಿದೆ ಎಂದವರು ತಿಳಿಸಿದರು.
ಇದುವರೆಗೆ ರಾಜ್ಯದಲ್ಲಿ ೪ ಕೋಟಿ ಲಸಿಕೆ ನೀಡಿಕೆ ಆಗಿದ್ದು, BBMP ವ್ಯಾಪ್ತಿಯಲ್ಲಿ ೧ ಕೋಟಿ ಲಸಿಕೆ ನೀಡಲಾಗಿದೆ. ಬೀದರ್, ಯಾದಗಿರಿ, ರಾಯಚೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಹೆಚ್ಚಿನ ಕ್ರಮ ಜರುಗಿಸಲಾಗುವುದು. ಕೊಳಗೇರಿಯ ಜನರಿಗೆ ಪ್ರತಿದಿನ ವಿಶೇಷ ಲಸಿಕಾ ಕಾರ್ಯಕ್ರಮ ನಡೆಸಲಾಗುವುದು, ಸಿಬ್ಬಂಧಿ ಜನರ ನಿವಾಸಗಳಿಗೆ ತೆರಳಿ ಲಸಿಕೆ ನೀಡುವರು ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಗಡಿಭಾಗದ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಲಸಿಕೆ ಹಾಕಲಾಗುವುದು, ಗಡಿಯಿಂದ ೨೦ ಕಿ.ಮೀ ವ್ಯಾಪ್ತಿಯ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಎಲ್ಲರಿಗೂ ಲಸಿಕೆ ನೀಡಿಕೆ ಮುಂದುವರೆಯುವುದು, ರಾಜ್ಯದಲ್ಲಿ ಒಟ್ಟು ಡಿಸೆಂಬರ್ ಅಂತ್ಯಕ್ಕೆ ಎರಡು ಡೋಸ್ ಲಸಿಕೆ ಸಹ ನೀಡುವ ಗುರಿ ಇದೆ ಎಂದು ಆರೋಗ್ಯ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿಸಿದರು.

























Discussion about this post