ಶಿಕಾರಿಪುರ : ಮನುಷ್ಯನಿಗೆ ಹೆತ್ತ ತಾಯಿ ಹೊತ್ತ ನೆಲ ಎಷ್ಟು ಮುಖ್ಯವೋ ಅಷ್ಟೇ ಧರ್ಮ ಪರಿಪಾಲನೆ ಮುಖ್ಯ. ಅಶಾಂತಿಯಿಂದ ತತ್ತರಿಸುತ್ತಿರುವ ಬದುಕಿಗೆ ಆಧ್ಯಾತ್ಮದ ಅರಿವು ಆಚರಣೆ ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಕಡೇನಂದಿಹಳ್ಳಿ ಕ್ಷೇತ್ರದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭದ ೬ನೇ ದಿನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ಭೂಮಿಯಲ್ಲಿ ಬಿತ್ತಿದ ಬೀಜಕ್ಕೆ ನೀರು ಗೊಬ್ಬರ ಹೇಗೆ ಅವಶ್ಯಕವೋ ಹಾಗೆಯೇ ನೀತಿಗೆ ಧರ್ಮವೂ ಅಷ್ಟೇ ಅವಶ್ಯಕವಾಗಿದೆ. ಯಾವಾಗಲೂ ನಾಶವಾಗದಿರುವುದೇ ನಿಜವಾದ ಧರ್ಮ. ಇದನ್ನು ನಾಶ ಮಾಡುವ ಶಕ್ತಿ ಯಾರಿಗೂ ಯಾವ ಕಾಲಕ್ಕೂ ಇಲ್ಲ. ಸತ್ಯವೇ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾ ಕವಚ. ಸತ್ಯದ ರಕ್ಷಾ ಕವಚ ನಾಶಗೊಂಡರೆ ಆಪತ್ತು ತಪ್ಪಿದ್ದಲ್ಲ. ದೇವರು ಮತ್ತು ಧರ್ಮವನ್ನು ಎಂದೆಂದಿಗೂ ಮರೆಯಬಾರದು. ಕಾಯಕ ದಾಸೋಹದ ಮೂಲಕ ಮಾನವ ಜೀವನಕ್ಕೆ ಶ್ರೇಯಸ್ಸನ್ನು ಕೊಟ್ಟ ಧರ್ಮ ವೀರಶೈವ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜ್ಞಾನ ಕ್ರಿಯಾತ್ಮಕ ಅರಿವುಗಳ ಜೊತೆಗೆ ಸಾಮಾಜಿಕ ಸತ್ಕ್ರಾಂತಿಗೆ ಹೊಸ ಭಾಷ್ಯ ಬರೆದವರೆಂಬುದನ್ನು ಮರೆಯುವಂತಿಲ್ಲ ಎಂದರು.
ಸುಸಂಸ್ಕೃತ ಕ್ರಿಯಾಶೀಲ ಸಂಸದರಾದ ಬಿ.ವೈ. ರಾಘವೇಂದ್ರ ಅವರಿಗೆ ವೀರಶೈವ ಸಿರಿ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಪ್ರಶಸ್ತಿ ಪುರಸ್ಕೃತರಾದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ಇದು ನನ್ನ ಬದುಕಿನ ಅವಿಸ್ಮರಣೀಯ ದಿನ. ಕಾಯಕಶೀಲರಿಗೆ ದಕ್ಷ ಪ್ರಾಮಾಣಿಕರಿಗೆ ಯಾವಾಗಲೂ ಗೌರವ ಇದ್ದು ಅಂತಹವರಿಗೆ ನೀಡುವ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿ ನನಗೆ ಪ್ರದಾನ ಮಾಡಿರುವುದು ನನ್ನ ಸುಕೃತ ಪುಣ್ಯ. ಎಲ್ಲರನ್ನು ಒಕ್ಕಟ್ಟಿನಲ್ಲಿ ಕರೆದೊಯ್ಯುವ ಶಕ್ತಿ ಧರ್ಮಕ್ಕಿದೆ. ಸಜ್ಜನ ಸ್ನೇಹಪರ ವ್ಯಕ್ತಿತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಜೀವನಕ್ಕೆ ಅನ್ನ ನೀರು ಎಷ್ಟು ಅವಶ್ಯಕವೋ ಅಷ್ಟೇ ಮಹಾತ್ಮರ ಆದರ್ಶ ನುಡಿಗಳು ಮುಖ್ಯವಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮಾರಂಭದ ಕಂಪು ಜನ ಸಮುದಾಯವನ್ನು ಸನ್ಮಾರ್ಗದತ್ತ ಕೊಂಡೊಯ್ಯಲಿ ಎಂದರು.
ಮಳಲಿ ಡಾ. ನಾಗಭೂಷಣ ಶಿವಾಚಾರ್ಯರು ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಮಾಡಿದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಪ್ರಶಸ್ತಿ ವಚನ ಮಾಡಿದರು. ದಿಗ್ವಿಜಯ ವಾಹಿನಿಯ ಪ್ರಶಾಂತ ರಿಪ್ಪನ್ಪೇಟೆ ಮಾತನಾಡಿ ಶ್ರೀ ರಂಭಾಪುರಿ ಪೀಠದ ದಸರಾ ನಡೆದು ಬಂದ ಇತಿಹಾಸವನ್ನು ವಿವರಿಸಿದರು.
ಅಮ್ಮಿನಭಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾನವ ಧರ್ಮದ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದ ಧರ್ಮ ವೀರಶೈವ. ಜಾತಿಗಿಂತ ನೀತಿ ತತ್ವಕ್ಕಿಂತ ಆಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದೆ ಎಂದರು.
ಸಮ್ಮುಖ ವಹಿಸಿದ ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳನ್ನು ವಿವರಿಸಿದರು. ಸಮಾರಂಭದ ನೇತೃತ್ವವನ್ನು ಕಡೇನಂದಿಹಳ್ಳಿ-ದುಗ್ಲಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಪ್ರಕಾಶ ಕೊರಟಗೆರೆ, ರುದ್ರಮುನಿ ಸಜ್ಜನ ರುದ್ರೇಶ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಆಶೀರ್ವದಿಸಿದರು.
ಶಿವಮೊಗ್ಗದ ಕುಮಾರಿ ಕೆ.ಆರ್.ಭೂಮಿಕಾ ಭರತ ನಾಟ್ಯ ಪ್ರದರ್ಶನ ನೀಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರು ವೇದಘೋಷ ಮಾಡಿದರು. ಹಿರೇಕೆರೂರಿನ ನಿವೃತ್ತ ಮುಖ್ಯ ಶಿಕ್ಷಕ ಕೆ.ಎನ್.ಹಂಚಿನ ಸ್ವಾಗತಿಸಿದರು. ಗಾನಭೂಷಣ ವೀರೇಶ ಕಿತ್ತೂರ ಇವರಿಂದ ಸಂಗೀತ ಸೌರಭ ಜರುಗಿತು. ರೇವಣಸಿದ್ಧಪ್ಪ ಪೂಜಾರ ತಬಲಾ ಸಾಥ ನೀಡಿದರು. ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು. ಸಮಾರಂಭದ ಕೊನೆಗೆ ಆಕರ್ಷಕ ನಜರ್ ಸಮರ್ಪಣೆ ಜರುಗಿತು.

























Discussion about this post