ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳ ಪ್ರಗತಿ ಸಹಾಯಕ ಆಯುಕ್ತರು ಪರಿಶೀಲನೆ ನಡೆಸಿ ಚುರುಕು ಮುಟ್ಟಿಸಬೇಕೆಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ ಸೂಚನೆ ನೀಡಿದ್ದಾರೆ.
ಪ್ರತಿ ಶಾಸಕರಿಗೆ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಗೆ ಅಗತ್ಯದ ಕಾಮಗಾರಿ ಕೈಗೊಳ್ಳಲು ಎರಡು ಕೋಟಿ ಅನುದಾನ ನೀಡಲಾಗುತ್ತದೆ ಎಂದು ಅವರು ಹೇಳಿದರು. ನಗರದಲ್ಲಿನ ಸರ್ಕೂಟ್ ಹೌಸ್ ನಲ್ಲಿ ಶುಕ್ರವಾರ ನಡೆಸಲಾದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಮಂಜೂರಾತಿ-ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಮ್ಮ ಕ್ಷೇತ್ರದಲ್ಲಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಾರ್ಯದ ಒತ್ತಡದಿಂದ ಕಾಮಗಾರಿಗಳ ಉಸ್ತುವಾರಿಯನ್ನು ಕಳೆದ ವರ್ಷದಿಂದ ಸಹಾಯಕ ಆಯುಕ್ತರಿಗೆ ವಹಿಸಿಕೊಟ್ಟಿದ್ದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಕಾಮಗಾರಿಗಳ ಅನುಷ್ಠಾನ ಚುರುಕುಗೊಳಿಸಬೇಕು, ಹಲವು ಏಜೆನ್ಸಿಗಳ ಮೂಲಕ ನಿರ್ವಹಿಸುವುದು ಉತ್ತಮ, ಪೂರ್ಣಗೊಂಡ ಕಾಮಗಾರಿ ತಪಾಸಣೆಯನ್ನು ಬೇಗ ನಡೆಸಬೇಕು, ಭರಿಸಿದ ಮೊತ್ತವನ್ನು ಇಲಾಖಾ ಸಾಫ್ಟ್ ವೇರ್ ನಲ್ಲಿ ದಾಖಲೆ ಮಾಡುತ್ತಿರಬೇಕು ಎಂದವರು ಕಿವಿ ಮಾತು ಹೇಳಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಮೂಲಕ ನಿರ್ವಹಿಸಲಾಗುತ್ತಿರುವ ಕಾಮಗಾರಿಗಳಲ್ಲಿ ಅಲ್ಲಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಸ್ ನೇರ ಮೇಲ್ವಿಚಾರಣೆ ನಡೆಸಬಹುದು, ಸಾಫ್ಟ್ ವೇರ್ ಸಮಸ್ಯೆ ಇದ್ದಲ್ಲಿ ಕೂಡಲೇ ಗಮನಕ್ಕೆ ತಂದು ಸರಿಪಡಿಸಬೇಕು, ಉತ್ಸಾಹದಿಂದ ಸಹಾಯಕ ಆಯುಕ್ತರು ಕಾಮಗಾರಿ ಪೂರ್ಣಗೊಳಿಸಬೇಕೆಂದು ಕಿವಿ ಮಾತು ಹೇಳಿದರು.
ರಾಜ್ಯದಲ್ಲಿ ಒಂದು ಸಾವಿರ ಕೋಟಿ ರೂ.ಗಳು ಈ ರೀತಿ ಕಾಮಗಾರಿಗಳಿಂದಾಗಿ ಬಾಕಿ ಉಳಿದಿದ್ದು, ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಸೇರಿದ ವಿವಿಧ ಪಿಡಿ ಖಾತೆಗಳಲ್ಲಿ ಇದೆ, ಆದ್ದರಿಂದ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಅಗತ್ಯ ಕಾಮಗಾರಿ ಪೂರೈಸಲು ಶಾಸಕರು-ಅಧಿಕಾರಿಗಳು ಸಹ ಜವಾಬ್ದಾರರು ಎಂದು ವಿಶ್ವೇಶ್ವರ ಕಾಗೇರಿಯವರು ಸಭೆಯಲ್ಲಿ ಒತ್ತಿ ಹೇಳಿದ್ದಾರೆ.

























Discussion about this post