ಬೆಂಗಳೂರು: ದಿಢೀರ್ ಬೆಳವಣಿಗೆಯೊಂದರಲ್ಲಿ ಅಕ್ಟೋಬರ್ 30 ರಂದು ನಡೆಯಲಿರುವ ಧಾರವಾಡ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಮಿತಿ ಸದಸ್ಯರ ಪಟ್ಟಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರರ ಹೆಸರನ್ನು ಸೋಮವಾರ ಸಂಜೆ ಸೇರಿಸಲಾಗಿದೆ.
ಇದಕ್ಕೂ ಮೊದಲು ಅಕ್ಟೋಬರ್ ೧ರಂದು ಪ್ರಕಟವಾಗಿದ್ದ ಚುನಾವಣಾ ಉಸ್ತುವಾರಿ ಸಮಿತಿಯ 13 ಸದಸ್ಯರ ಪಟ್ಟಿಯಲ್ಲಿ ವಿಜಯೇಂದ್ರರ ಹೆಸರಿರಲಿಲ್ಲ. ಇದರಿಂದ ಆಕ್ರೋಶಿತರಾದ ವಿಜಯೇಂದ್ರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಹಾನಗಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದು ನಂತರ ತಾವೇ ಹಿಂದೆ ಸರಿದಿದ್ದ ವಿಜಯೇಂದ್ರರಿಗೆ ಉಸ್ತುವಾರಿ ಸಮಿತಿಯಲ್ಲೂ ಸ್ಥಾನ ಸಿಗದೆ ಇದ್ದುದನ್ನು ಒಂದು ರೀತಿಯ ಹಿನ್ನಡೆಯೆಂದೇ ಭಾವಿಸಲಾಗಿತ್ತು. ಹೆಸರನ್ನು ಸೇರಿಸುವ ಮೊದಲು, ಯಡಿಯೂರಪ್ಪನವರು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಇದಕ್ಕಾಗಿ ಯಾವುದೇ ವಿರೋಧ ವ್ಯಕ್ತಪಡಿಸದಂತೆ ಮನವಿ ಮಾಡಿದ್ದರು. ವಿಜಯೇಂದ್ರ ಕೂಡ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿ ಪಕ್ಷಕ್ಕೆ ಹಾಗೂ ನಾಯಕರುಗಳಿಗೆ ಮುಜುಗರ ಉಂಟಾಗುವಂತಹ ಯಾವುದೇ ಕೆಲಸ ಮಾಡಬಾರದೆಂದು ಮನವಿ ಮಾಡಿದ್ದರು.
ಬಿಜೆಪಿಯ ಹಿರಿಯ ನಾಯಕ, ಮಾಜಿ ಮಂತ್ರಿ ಶ್ರೀ ಸಿ.ಎಂ. ಉದಾಸಿಯವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸದ್ಯ ಚುನಾವಣೆ ನಡೆಯುತ್ತಿದ್ದು ಬಿಜೆಪಿಯ ಅಭ್ಯರ್ಥಿಯ ಆಯ್ಕೆ ಬಹುತೇಕ ಬುಧವಾರ ಆಗುವ ಸಾಧ್ಯತೆಯಿದೆ. ಕಾಂಗ್ರೆಸ್ ಶ್ರೀ ಶ್ರೀನಿವಾಸ ಮಾನೆ ಹಾಗೂ ಶ್ರೀ ಮನೋಹರ ತಹಸೀಲ್ದಾರ್ ಅವರ ಹೆಸರುಗಳನ್ನು ಅಂತಿಮಗೊಳಿಸಿ ವರಿಷ್ಠರ ಅನುಮೋದನೆಗಾಗಿ ಕಳುಹಿಸಿದೆ.
ಬಿಜೆಪಿ ಭಾನುವಾರದ ತನ್ನ ಕೋರ್ ಕಮಿಟಿಯ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಶ್ರೀ ಅರುಣ್ಸಿಂಗ್ರ ಉಪಸ್ಥಿತಿಯಲ್ಲಿ ತನ್ನ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ನಡೆಸಲಿದೆ. ಬಿಜೆಪಿಯ ಉನ್ನತಮಟ್ಟದ ಮೂಲಗಳ ಪ್ರಕಾರ ಮಾಜಿ ಶಾಸಕ ಶ್ರೀ ರಮೇಶ್ ಭೂಸನೂರ ಹಾಗೂ ಶ್ರೀಮತಿ ರೇವತಿ ಉದಾಸಿಯವರ (ಸಿ.ಎಂ.ಉದಾಸಿಯವರ ಸೊಸೆ) ಹೆಸರುಗಳು ಕ್ರಮವಾಗಿ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳಿಗೆ ಮುಂಚೂಣಿಯಲ್ಲಿವೆ.
ಎರಡೂ ಕ್ಷೇತ್ರಗಳಿಗೆ ಅಂತಿಮಗೊಳಿಸಲಾದ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರ ಅವಗಾಹನೆಗಾಗಿ ಕಳುಹಿಸಲಾಗಿದೆಯೆಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರು ಎರಡೂ ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಈಗಾಗಲೇ ನಾಜಿಯಾ ಶಕೀಲ್ ಅಹಮದ್ ಅಂಗಡಿ ಹಾಗೂ ನಿಯಾಜ್ ಶೇಖ್ ರನ್ನುಕ್ರಮವಾಗಿ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳೆಂದು ಘೋಷಿಸಿದೆ.

























Discussion about this post