ಬೆಂಗಳೂರು (ಕನ್ನಡನಾಡಿ ಸುದ್ದಿಜಾಲ): ಕರ್ನಾಟಕ ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪನವರು ಯಾವುದೋ ಬೀದಿ ರೌಡಿಯ ರೀತಿಯಲ್ಲಿ ಮಾತನಾಡುವುದನ್ನು ಬಿಟ್ಟು ವಿವೇಕದ ಮಾತಾಡಬೇಕು ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಿವಿಮಾತು ಹೇಳಿದ್ದಾರೆ.
ಇದಕ್ಕೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಹೆಚ್.ಸಿ.ಮಹದೇವಪ್ಪನವರು, “ನಿಮ್ಮ ಪಕ್ಷದ ಅಜ್ಞಾನಿಗಳೆಲ್ಲಾ ಸೇರಿಕೊಂಡು ಜನ ಸಾಮಾನ್ಯರ ಬದುಕಲ್ಲಿ ಉಂಟು ಮಾಡಿರುವ ಸಂಕಷ್ಟಗಳನ್ನು ಪರಿಹರಿಸಲು ಕಾಂಗ್ರೆಸ್ ಪಕ್ಷದ ಬಳಿ ಸರಿಯಾದ ಆಡಳಿತಾತ್ಮಕ ಸಲಹೆಗಳನ್ನು ಪಡೆಯಿರಿ. ಕಾರಣ ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಹೀಗೆ ರೌಡಿಗಳಂತೆ ಮಾತನಾಡುವುದು ಮತ್ತು ದ್ವೇಷ ಹಬ್ಬಿಸಿ ಸಮಾಜವನ್ನು ಹಾಳು ಮಾಡುವುದು ಬಿಟ್ಟರೆ ಮತ್ತೇನೂ ಬರುವುದಿಲ್ಲ ಎಂಬುದು ನಮಗೆ ಗೊತ್ತಿದೆ” ಎಂದು ತಿರುಗೇಟು ನೀಡಿದ್ದಾರೆ.
ವಾಸ್ತವವಾಗಿ ಹೇಳುವುದಾದರೆ ಕರೋನಾ ಸಂದರ್ಭದಲ್ಲಿ ನಿಮ್ಮಂತಹ ಅವಿವೇಕಿಗಳ ಆಡಳಿತ ವೈಫಲ್ಯದಿಂದಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನದೇ ಈ ರಾಜ್ಯದ ಎಲ್ಲಾ ಪಕ್ಷಕ್ಕೆ ಸೇರಿದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದು, ಪಕ್ಷಾತೀತವಾಗಿ, ಧರ್ಮಾತೀತವಾಗಿ ಮತ್ತು ಜಾತ್ಯಾತೀತವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಿಂದೂಗಳ ರಕ್ಷಣೆ ಎಂದು ಗಂಟಲು ಹರಿದುಕೊಳ್ಳುತ್ತಿದ್ದ ನಿಮಗೆ ಅವರ ರಕ್ಷಣೆ ಇರಲಿ ಒಂದು ಆಕ್ಸಿಜನ್ ಬೆಡ್ ಹೊಂದಿಸಲು ಆಗಲಿಲ್ಲ ನಿಮ್ಮ ಯೋಗ್ಯತೆಗೆ. ನನ್ನ ಪ್ರಕಾರ ಆಡಳಿತಾತ್ಮಕವಾಗಿ ಅಂದೇ ನಿಮ್ಮ ಸರ್ಕಾರ ಸತ್ತು ಹೋಗಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
“ಒಂದು ಕೊಟ್ಟರೆ, ಎರಡು ಕೊಡುತ್ತೇವೆ,” ಎಂಬ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಏಕೆಂದರೆ ಜನ ಸಾಮಾನ್ಯರು ಮತ್ತು ಪಕ್ಷದ ಕಾರ್ಯಕರ್ತರು ನೀವು ಹೇಳಿದಂತೆ ಹೊಡಿ ಬಡಿ ಜಗಳ ಮತ್ತು ಹಿಂಸಾಚಾರವನ್ನು ಎಂದಿಗೂ ಮಾಡುವುದಿಲ್ಲ. ಇದೆಲ್ಲಾ ನಿಮ್ಮಂತವರ ಸೊಕ್ಕಿನ ಪ್ರಲಾಪವಷ್ಟೇ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿ ಕೂತರೂ ಅಸಂವಿಧಾನಿಕವಾಗಿ ಮಾತನಾಡುವ ಮತ್ತು ಸಾರ್ವಜನಿಕ ಜೀವನದಲ್ಲಿ ಇರಲು ಲಾಯಕ್ಕಿಲ್ಲದ ಇಂತಹವರ ರಾಜೀನಾಮೆಯನ್ನು ಪಡೆಯಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಈ ಮೂಲಕ ಆಗ್ರಹಿಸುತ್ತೇನೆ ಎಂದು ಮಹಾದೇವಪ್ಪ ತಿಳಿಸಿದ್ದಾರೆ.

























Discussion about this post