ಕನ್ನಡನಾಡಿ ಸುದ್ದಿಜಾಲ: ಕ್ಲಬ್‌ಹೌಸ್‌ನಲ್ಲಿ ಅನುಭವ ಮಂಟಪ ಕ್ಲಬ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಪ್ರಶ್ನೆಗಳಿಗೆ ಉತ್ತರಿಸಿದರು.
ಕರಾವಳಿ ಭಾಗವು ಕೋಮುವಾದದ ಪ್ರಯೋಗಾಲಯ ಎಂಬುದು ಸತ್ಯ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕರಾವಳಿಯಲ್ಲಿ ಕೋಮುಗಲಭೆಗಳನ್ನು ತಡೆಯುವಲ್ಲಿ ಹಿನ್ನಡೆಯಾಯಿತು ಎಂಬುದನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
‘ಕರಾವಳಿಯಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಪ್ರವೃತ್ತಿಯ ಕಡಿವಾಣಕ್ಕೆ ಕಠಿಣ ಕ್ರಮ ಜರುಗಿಸದಿರುವುದೂ ಇದಕ್ಕೆ ಕಾರಣವೇ?” ಎಂದು ಶ್ರೀನಿವಾಸ ಕಾರ್ಕಳ ಅವರು ಪ್ರಶ್ನಿಸಿದರು.
“ಕಾಂಗ್ರೆಸ್ ಅವಧಿಯಲ್ಲಿ ಕ್ರಮ ಜರುಗಿಸಲಾಗಿತ್ತಾದರೂ ಕರಾವಳಿಯಲ್ಲಿ ಕೋಮುವಾದಕ್ಕೆ ಕಡಿವಾಣ ಬೀಳುವಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಹಾಗೆಂದು RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕುರಿತು ಯಾವುದೇ ಭಯವೇನೂ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಮತ್ತೊಂದು ಪ್ರಶ್ನೆಗೆ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿ, “ಕಾಂಗ್ರೆಸ್ ಯಾವುದೇ ಸಮುದಾಯದ ವಿರುದ್ಧವೂ ಇಲ್ಲ, ಪರವೂ ಇಲ್ಲ. ಯಾರಿಗೆ ಅನ್ಯಾಯವಾದರೂ ಕಾಂಗ್ರೆಸ್ ಪ್ರಶ್ನಿಸಲಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಲ್ಲರಿಗೂ ಉದ್ಯೋಗ ಕೊಡಬೇಕಲ್ಲವೇ? ಕನ್ನಡ ಭಾಷೆಯಲ್ಲಿಯೂ ಪರೀಕ್ಷೆ ನಡೆಸಲು ಅವಕಾಶ ನೀಡಬೇಕಲ್ಲವೇ?” ಎಂದರು.
ಹಲವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಅವರು, ಬಿಜೆಪಿ ನಾಯಕರು ಆರ್‌ಎಸ್‌ಎಸ್ ಕೈಗೊಂಬೆಗಳಾಗಿದ್ದಾರೆ ಎಂದರು. ‘ಎನ್‌ಇಪಿ’ ಶಿಕ್ಷಣ ವ್ಯವಸ್ಥೆಗೆ ಮಾರಕ. ಅದು ನಾಗಪುರ ಎಜುಕೇಷನ್ ಪಾಲಿಸಿ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಸಹ ಟೀಕಿಸಿದರು.
‘ಸರ್ಕಾರ ಯಾವುದೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ವಸತಿ ನಿರ್ಮಾಣ ಯೋಜನೆ ಪ್ರಗತಿಯನ್ನು ಸಾಧಿಸಿಲ್ಲ’ ಎಂದರು.
ಸಿದ್ದರಾಮಯ್ಯನವರ ಕಾರ್ಯಕ್ರಮ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ನಲ್ಲೂ ಪ್ರಸಾರವಾಯಿತು. ಸುಮಾರು ೧೫೦೦ ಮಂದಿ ಕ್ಲಬ್‌ಹೌಸ್‌ನಲ್ಲಿ ಸಿದ್ದರಾಮಯ್ಯನವರ ಮಾತುಗಳನ್ನು ಆಲಿಸಿದರು. ಸಾವಿರಾರು ಜನರು ಯೂಟ್ಯೂಬ್ live ಹಾಗೂ ಫೇಸ್‌ಬುಕ್ live ನಲ್ಲೂ ಮಾತುಗಳನ್ನು ಆಲಿಸಿದರು.

























Discussion about this post