ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ. ಕೊರೊನಾ ಹಿನ್ನೆಲೆ ಶುಲ್ಕ ಹೆಚ್ಚಳ ಮಾಡಲ್ಲ. ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 20,000ಕ್ಕಿಂತ ಹೆಚ್ಚು ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ. ಇತರೆ ಶುಲ್ಕಗಳ ಮಿತಿ 20 ಸಾವಿರ ರೂಪಾಯಿಗೆ ನಿಗದಿ ಮಾಡಲಾಗಿದೆ. ಹೆಚ್ಚುವರಿ ಶುಲ್ಕ ಪಡೆಯದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನಿಗಾ ವಹಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ.
ಹೆಚ್ಚುವರಿ ಶುಲ್ಕ ಪಡೆಯದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನಿಗಾ ವಹಿಸಬೇಕೆಂದು ವಿಟಿಯು (VTU) ಕುಲಪತಿ ಪ್ರೊ.ಕರಿಸಿದ್ದಪ್ಪ ಅವರಿಗೆ ಡಾ.ಅಶ್ವತ್ಥ್ ನಾರಾಯಣ ಜವಾಬ್ದಾರಿ ನೀಡಿದ್ದಾರೆ. ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶೇ.15ರಿಂದ 20ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ನೀಡಿದ್ದು, ಈ ಕುರಿತು ಮುಂಬರುವ ದಿನಗಳಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದೇನೆ ಎಂದು ಅವರು ಹೇಳಿದರು.
ಸದರಿ ನಿರ್ಧಾರಕ್ಕೆ ಖಾಸಗಿ ಕಾಲೇಜುಗಳು ಸಮ್ಮತಿ ಸೂಚಿಸಿವೆ ಎಂದು ಸಹ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಇಂಜಿನಿಯರಿಂಗ್ ಕಾಲೇಜುಗಳು ಸ್ಕಿಲ್ ಟ್ರೈನಿಂಗ್ ಫೀಸ್ (SKILL TRAINING FEES) ತೆಗೆದುಕೊಳ್ಳುವುದು ಕಡ್ಡಾಯ ಅಲ್ಲ. ವಿಟಿಯು ಭೇಟಿ ನೀಡಿ ಒಪ್ಪಿಗೆ ಕೊಟ್ಟ ಬಳಿಕ ಶುಲ್ಕ ಪಡೆಯಬೇಕು. ವಿಟಿಯು ಒಪ್ಪಿಗೆ ಇಲ್ಲದೆ ಸ್ಕಿಲ್ ಫೀ (SKILL FEES) ಸಂಗ್ರಹಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಶುಲ್ಕ ಹೆಚ್ಚಳ ಸಂಬಂಧ ಸಮಿತಿಯನ್ನು ರಚನೆ ಮಾಡಲಾಗಿದೆ. ಪ್ರೊ.ಕರಿಸಿದ್ದಪ್ಪ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಈ ವರ್ಷ ಯಾವ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಅಭ್ಯಾಸ ಆರಂಭ:
ರಾಜ್ಯದ ನಾಲ್ಕು ಕಾಲೇಜುಗಳಲ್ಲಿ ಕನ್ನಡದಲ್ಲೇ ಇಂಜಿನಿಯರಿಂಗ್ ವಿದ್ಯಾಭ್ಯಾಸ ಆರಂಭ ಮಾಡಲಾಗುವುದು. ಭಾಲ್ಕಿಯ ಭೀಮಣ್ಣ ಖಂಡ್ರೆ ಕಾಲೇಜು, ವಿಜಯಪುರದ ಬಿಎಲ್‌ಡಿಇ ಕಾಲೇಜು, ಎಸ್ ಜೆಆರ್ ಚಿಕ್ಕಬಳ್ಳಾಪುರ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಈ ವರ್ಷದಿಂದ ಆರಂಭವಾಗುತ್ತದೆ. ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.
ಕನ್ನಡದಲ್ಲೇ ಪಠ್ಯ ವಸ್ತು ಈಗಾಗಲೇ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲೇ ಇಂಜಿನಿಯರಿಂಗ್ ವಿದ್ಯಾಭ್ಯಾಸ ಸಂಖ್ಯೆ ಹೆಚ್ಚಾಗಲಿದೆ ಎಂದು ಸುದ್ದಿಗೋಷ್ಠಿ ನಡೆಸಿದೆ ಎಂದು ಅವರು ತಿಳಿಸಿದರು.

























Discussion about this post