ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಸರಳ ರೀತಿಯಲ್ಲಿ ನಡೆದ್ರೂ ವರ್ಣರಂಜಿತ ತೆರೆಬಿದ್ದಿದೆ. ರಾತ್ರಿಯಿಡೀ ನಡೆದ ಮೈನವಿರೇಳಿಸೋ ದಶಮಂಟಪಗಳ ಶೋಭಾಯಾತ್ರೆ ಜನರ ಮನ ಸೂರೆಗೊಂಡಿತು.
ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಸ್ತಬ್ಧ ಚಿತ್ರ ಪ್ರದರ್ಶನ ಜನರನ್ನ ದೇವಲೋಕಕ್ಕೆ ಕರೆದೊಯ್ದಿತ್ತು. ದುಷ್ಟ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ದಶಮಂಟಪ ಪ್ರದರ್ಶನ ದೇವಾನುದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆದ್ದರು.
ಎಲ್ಲೆಲ್ಲೂ ಜನವೋ ಜನ, ಎತ್ತನೋಡಿದರೂ ಜನಸಾಗರ. ಕಣ್ಣು ಕೋರೈಸೋ ವಿದ್ಯುತ್ ದೀಪಾಲಂಕಾರ, ಹುಚ್ಚೆದ್ದು ಕುಣಿಯುತ್ತಿರೋ ಜನರು, ಅಬ್ಬರದಿಂದ ಪ್ರದರ್ಶನಗೊಂಡ ಸ್ತಬ್ಧ ಚಿತ್ರಗಳು. ಇದು ಮಡಿಕೇರಿ ದಸರಾದ ಕೊನೆಯದಿನದ ಶೋಭಾಯಾತ್ರೆಯ ಚಿತ್ರಣ. ಐತಿಹಾಸಿಕ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ತೆರೆಬಿದ್ದಿದೆ.
ಮಂಜಿನ ನಗರಿ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಪ್ರದರ್ಶನ ಮೈನವಿರೇಳಿಸುವಂತಿತ್ತು. ದೇವಾನು ದೇವತೆಗಳ ಲೀಲೆಗಳನ್ನ ಬಿಂಬಿಸೋ ಕಥಾ ಪ್ರಸಂಗಗಳ ಸಂಯೋಜನೆ ಎಲ್ಲರ ಗಮನಸೆಳೆಯಿತು.
ಎದೆನಡುಗಿಸೋ ಶಬ್ದ, ಅದಕ್ಕೆ ತಕ್ಕಂತೆ ಬೆಳಕು. ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸೋ ದೇವರ ಮೂರ್ತಿಗಳು ನೆರೆದಿದ್ದ ಜನರನ್ನ ಒಮ್ಮೆ ದೇವಲೋಕಕ್ಕೆ ಸಂಚಾರಮಾಡಿಸಿದಂತಿತ್ತು. ಕೊರೊನಾ ಮಹಾಮಾರಿಯಿಂದ ಕಳೆದ ವರ್ಷ ಕೇವಲ ಸ್ತಬ್ಧ ಮಂಟಪಗಳಿಗೆ ಸೀಮಿತವಾಗಿತ್ತು. ಆದರೆ ಈ ಬಾರಿ ಸರಳ ರೀತಿಯಲ್ಲಿ ದಶಮಂಟಪಗಳ ಶೋಭಾಯತ್ರೆ ಎಲ್ಲಾರನ್ನು ಅಕರ್ಷಣೆ ಮಾಡಿತ್ತು.

























Discussion about this post