ಬೆಂಗಳೂರು: ರಾಜ್ಯದಲ್ಲಿ ವಿವಿಧ ಸಂಘಟನೆಗಳ ನೆರವಿನಿಂದ ವಿದೇಶಿ ಮಿಷನರಿಗಳು ಒತ್ತಾಯದಿಂದ ಮತಾಂತರ ಕಾರ್ಯ ನಡೆಸುತ್ತಿದ್ದು, ಇದು ಭವಿಷ್ಯದ ಅಶಾಂತಿಗೆ ಕಾರಣವಾಗುವುದು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ. ಬೋಪಯ್ಯ ವಿಧಾನಸಭೆಯಲ್ಲಿ ಧ್ವನಿ ಎತ್ತಿದರು.
ಇಂತಹ ಒತ್ತಾಯದ ಮತಾಂತರ ತಡೆಯಲು ಉತ್ತರ ಪ್ರದೇಶದ ಮಾದರಿ ಕಾನೂನು ರೂಪಿಸಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.
ವಿಧಾನಸಭೆಯ ಕಲಾಪದ ಶೂನ್ಯವೇಳೆಯಲ್ಲಿ ಮತಾಂತರ ಕುರಿತ ವಿಷಯ ಪ್ರಸ್ತಾಪಿಸಿದ ಶಾಸಕ ಗೂಳಿಹಟ್ಟಿ ಶೇಖರ್ ಅವರು ಚಿತ್ರದುರ್ಗದಲ್ಲಿ ೨೦ ಸಾವಿರಕ್ಕೂ ಹೆಚ್ಚು ಮಂದಿ ಮತಾಂತರವಾಗಿದ್ದಾರೆ, ನನ್ನ ಹೆತ್ತ ತಾಯಿ ಸಹ ಮತಾಂತರಕ್ಕೆ ಒಳಗಾಗಿದ್ದಾರೆ, ನನ್ನ ತಾಯಿಯ ಬ್ರೈನ್ ವಾಶ್ ಮಾಡಿದ್ದಾರೆ ಎಂದು ದೂರಿದ್ದರು.
ದಲಿತರು, ಹಿಂದುಳಿದ ವರ್ಗದವರನ್ನು ಜಾಸ್ತಿ ಮತಾಂತರ ಮಾಡುತ್ತಿದ್ದು, ಇದೊಂದು ದೊಡ್ಡ ಪಿಡುಗೇ ಆಗಿದೆ, ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು ಇದು ಗೂಳಿಹಟ್ಟಿ ಶೇಖರ್ ಅವರ ಸಮಸ್ಯೆ ಅಷ್ಟೇ ಅಲ್ಲ, ಈ ಪಿಡುಗು ರಾಜ್ಯದೆಲ್ಲೆಡೆ ಹರಡಿದೆ. ವಿವಿಧ ಸಂಘಟನೆಗಳ ನೆರವಿನಿಂದ ವಿದೇಶಿ ಮಿಷನರಿಗಳು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡದ ಕಾಲೂನಿಗಳನ್ನು ಗುರಿಯಾಗಿಟ್ಟುಕೊಂಡು ಮತಾಂತರ ನಡೆಸುತ್ತಿದ್ದಾರೆ, ಇದು ಭವಿಷ್ಯದಲ್ಲಿ ಸಮಾಜದ ಅಶಾಂತಿ ಸೃಷ್ಠಿಗೆ ಕಾರಣವಾಗುವುದು. ಅದಕ್ಕೆ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ರೂಪಿಸುವ ಮೂಲಕ ಕಡಿವಾಡ ಹಾಕಬೇಕು ಎಂದು ಸಲಹೆ ನೀಡಿದರು.
ಸದಸ್ಯರ ಮಾತು ಆಲಿಸಿದ ಗೃಹಸಚಿವ ಅರಗ ಜ್ಞಾನೇಂದ್ರ, ಆಮಿಷವೊಡ್ಡಿ ಮತಾಂತರ ನಡೆಸುವುದು ಅಪರಾಧ, ಶಾಂತಿ ಭಂಗದ ಕರ್ಯ ಎಂಬ ಆತಂಕವಿದೆ, ಸರ್ಕಾರ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಚಿಕ್ಕಮಗಳೂರಿನ ಕೊಪ್ಪದಲ್ಲೂ ಸಹ ೮೦ಕ್ಕೂ ಹೆಚ್ಚು ಮಂದಿಯನ್ನು ಮತಾಂತರ ಮಾಡಿದ ಕುರಿತು ಕನ್ನಡನಾಡಿ ವರದಿ ಪ್ರಕಟಿಸಿದ್ದನ್ನು ಈ ಸಂದರ್ಭ ಉಲ್ಲೇಖಿಸಬಹುದು.

























Discussion about this post