ಬೆಂಗಳೂರು: ಬೆಂಗಳೂರಿಗರಿಗೆ ಶೀಘ್ರದಲ್ಲೇ ಲಾಲ್‌ಬಾಗ್ ಹಾಗೂ ಕಬ್ಬನ್ ಪಾರ್ಕ್ ಗಳಿಗಿಂತ ದೊಡ್ಡ ಉದ್ಯಾನವನ ದೊರೆಯಲಿದೆ. ಈ ಪ್ರಸ್ತಾಪಿತ ಉದ್ಯಾನವನ ಯಲಹಂಕದ ಜರಕಬಂಡೆ (ಜೆಬಿ) ಕಾವಲ್ ಬಳಿ ೬೪೮ ಎಕರೆ ಪ್ರದೇಶವ್ಯಾಪ್ತಿಯಲ್ಲಿ ತಲೆ ಎತ್ತಲಿದೆ ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದ್ದಾರೆ.
ಅರಣ್ಯ ಇಲಾಖೆಗೆ ಸೇರಿದ ಈ ಭೂಮಿಯನ್ನು ತೋಟಗಾರಿಕಾ ಸಚಿವರಾದ ಎನ್. ಮುನಿರತ್ನ ಅವರು ಮಂಗಳವಾರದಂದು ಅರಣ್ಯ ಸಚಿವ ಉಮೇಶ್ ಕತ್ತಿ ಅವರನ್ನು ಭೇಟಿ ಮಾಡಿ ಉದ್ಯಾನವನ ನಿರ್ಮಾಣಕ್ಕೆ ಇಲಾಖೆಯ ಅನುಮತಿಯನ್ನು ಪಡೆದಿದ್ದಾರೆ.
ಉದ್ಯಾನವನ ನಿರ್ಮಾಣಕ್ಕಾಗಿ ಈಗಾಗಲೇ ಈ ಭೂಪ್ರದೇಶದ ಸಮೀಕ್ಷೆಯನ್ನು ನಡೆಸಲಾಗಿದೆ. ಈ ಪ್ರಸ್ತಾಪಿತ ಉದ್ಯಾನವನದಲ್ಲಿ ಪ್ರಸ್ತುತ ೩೨,೦೦೦ ನೀಲಗಿರಿ ಮರಗಳಿವೆ. ಸರ್ಕಾರದ ನಿರ್ಧಾರದ ಪ್ರಕಾರ ನೀಲಗಿರಿ ಮರಗಳು ಅತೀ ಹೆಚ್ಚಿನ ಪ್ರಮಾಣದ ನೀರನ್ನು ಸೆಳೆಯುವ ಕಾರಣದಿಂದಾಗಿ ಈ ಮರಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದೆ
ಈ ಪ್ರಸ್ತಾಪಿತ ಉದ್ಯಾನವನ್ನು ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ. ಈ ಉದ್ಯಾನವನ ಬೆಂಗಳೂರು ಮಹಾನಗರದ ಹಸಿರು ವ್ಯಾಪ್ತಿಯನ್ನು ಮಹತ್ತರವಾದ ಮಟ್ಟಿಗೆ ವೃದ್ಧಿಸಲಿದ್ದು, ನಗರದಲ್ಲಿ ಹೆಚ್ಚಾಗುತ್ತಿರುವ ವಾಹನಗಳಿಂದಾಗಿ ಉದ್ಭವಿಸಿರುವ ವಾಯು ಮಾಲಿನ್ಯವನ್ನು ತಕ್ಕ ಮಟ್ಟಿಗೆ ಕಡಿಮೆಗೊಳಿಸಲಿದೆ.
ಜೆಬಿ ಕಾವಲ್‌ನಲ್ಲಿ ಈಗಾಗಲೇ ೩೨ ಹೆಕ್ಟೇರ್ ಪ್ರದೇಶದಷ್ಟು ಮೀಸಲು ಅರಣ್ಯವಿದೆ. ಅಲ್ಲಿ ೨೦೧೫ರಲ್ಲಿ ‘ಟ್ರೀ ಪಾರ್ಕ್’ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ಒದಗಿಸುತ್ತಿರುವ ಏಕೈಕ ಮೀಸಲು ಅರಣ್ಯ. ಇಲ್ಲಿರುವ ವಿವಿಧ ತಳಿಗಳ ಮರಗಳು ಈಗಾಗಲೇ ಪರಿಸರಪ್ರಿಯರು ಹಾಗೂ ಸಸ್ಯಶಾಸ್ತಜ್ಞರಲ್ಲಿ ಕುತೂಹಲವನ್ನು ಸೃಷ್ಟಿಸಿದೆ.
ಮರಗಳಲ್ಲದೆ ಈ ಸ್ಥಳದಲ್ಲಿ ಅನೇಕ ಔಷಧೀಯ ಗುಣಗಳುಳ್ಳ ಸಸಿಗಳಿವೆ. ಹಾಗಾಗಿ, ಇದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಒಂದು ಅತ್ಯಂತ ಕುತೂಹಲಕರ, ಮನರಂಜನೆ, ಕಲಿಕೆ, ಪರಿಸರ-ಪ್ರವಾಸೋದ್ಯಮಗಳನ್ನು ಒದಗಿಸುವ ಪ್ರಮುಖ ಕೇಂದ್ರ ಸ್ಥಾನವಾಗಲಿದೆ. ಇದರ ಪಕ್ಕದಲ್ಲಿ ಬೃಹತ್ ಉದ್ಯಾನವನ ನಿರ್ಮಾಣ ಯೋಜನೆ ಇರುವುದರಿಂದ ಇನ್ನಷ್ಟು ಪರಿಸರಪ್ರೇಮಿಗಳನ್ನು ಸೆಳೆಯುವುದರಲ್ಲಿ ಅಚ್ಚರಿ ಇಲ್ಲ.

























Discussion about this post