ಬೆಂಗಳೂರು: ಕೋವಿಡ್ 3ನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೆರವಣಿಗೆ, ಚುನಾವಣೆಯ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ನಿರ್ಬಂಧ ವಿಧಿಸುವ ಬಗ್ಗೆ ಸದ್ಯದಲ್ಲೇ ಮಾರ್ಗಸೂಚಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಈಗಾಗಲೇ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಧಿಸಲಾಗಿದೆ. ಕೇರಳದಿಂದ ಆಗಮಿಸುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವುದಕ್ಕೆ ನಿರ್ಬಂಧ ವಿಧಿಸಲು ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಹೇಳಿದರು.
೬,೭,೮ ತರಗತಿ ಪ್ರಾರಂಭಕ್ಕೆ ಪ್ರಸ್ತಾಪ
ಇದೇವೇಳೆ, ಪ್ರಾಥಮಿಕ ಶಾಲೆಯ 6, 7 ಮತ್ತು 8ನೇ ತರಗತಿಗಳ ಪ್ರಾರಂಭದ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೆ ಎನ್.ಡಿ.ಆರ್.ಎಫ್. (NDRF) ಅಡಿಯಲ್ಲಿ ರಾಜ್ಯಕ್ಕೆ ಅಗತ್ಯ ನೆರವು ದೊರಕಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಕೇಂದ್ರ ಅಧ್ಯಯನ ತಂಡ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಆಗಮಿಸಿದ್ದು, ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘ ಪೂರ್ವಭಾವಿ ಚರ್ಚೆ ನಡೆಸಲಾಗುವುದು. ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಯ ನಂತರ ಅಂತಿಮ ಸಭೆ ನಡೆಸಲಾಗುವುದು ಎಂದರು.
ಅಧ್ಯಯನ ತಂಡಕ್ಕೆ ವರದಿಗಳನ್ನು ನೀಡಿ, ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ತಂಡದೊಂದಿಗೆ ಅಧಿಕಾರಿಗಳು ಪ್ರವಾಸ ಮಾಡಲಿದ್ದು ಎಲ್ಲಿ ಅತಿ ಹೆಚ್ಚು ಹಾನಿ ಉಂಟಾಗಿದೆ ಆ ಪ್ರದೇಶಗಳಲ್ಲಿ ತಂಡ ಭೇಟಿ ನೀಡಿ ವರದಿ ನೀಡಲಿದ್ದಾರೆ ಎಂಬ ಮಾಹಿತಿ ವಿವರಿಸಿದರು.

























Discussion about this post