ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಹೊರವಲಯದ ಗುಂಡುತೋಪಿನಲ್ಲಿ ಅಲೆಮಾರಿಗಳ ಕುಟುಂಬಗಳು ವಾಸಿಸುತ್ತಿವೆ. ಜೋಪಡಿಯಂತಹ ಗುಡಿಸಲುಗಳಲ್ಲಿ ವಾಸವಾಗಿರುವ ಈ ಕುಟುಂಬಗಳು ಮಳೆಗಾಲ ಬಂತೆಂದರೆ ಜಲಚರಗಳಂತೆ ನೀರಿನಲ್ಲೇ ಜೀವಿಸಬೇಕಾದಂತಹ ಸ್ಥಿತಿ ಇದೆ. ಯಾವುದೇ ಮೂಲಭೂತ ಸೌಲಭ್ಯಗಳೂ ಇಲ್ಲದೆ ನಾಗರಿಕರ ಆಸುಪಾಸಿನಲ್ಲೇ ಬದುಕುತ್ತಿರುವ ಸುಡುಗಾಡು ಸಿದ್ದರ ಅಳಲು ಯಾರಿಗೂ ಕೇಳಿಸುತ್ತಿಲ್ಲ.
ಮೂರು ದಶಕಗಳಿಂದಲೂ ಸುಮಾರು 20ಕ್ಕೂ ಹೆಚ್ಚು ಸುಡುಗಾಡು ಸಿದ್ದರ ಕುಟುಂಬಗಳು ಈ ಗುಂಡುತೋಪಿನಲ್ಲಿ ನೆಲೆಸಿವೆ. ಆದರೂ ಇವರ ಸಂಕಟವನ್ನೇ ಕೇಳುವವರೇ ಇಲ್ಲ. ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಹಲವು ಮನವಿಗಳನ್ನು ಸಲ್ಲಿಸಿ ಸೌಲಭ್ಯ ಕಲ್ಪಿಸುವಂತೆ ಕೇಳಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಸುಡುಗಾಡುಸಿದ್ದ ಕುಟುಂಬಗಳು ದೂರಿವೆ.
ತೆಂಗಿನಗರಿಗಳಿಂದ ಬಿಸಿಲ ತಾಪವನ್ನು ಕಡಿಮೆ ಮಾಡಿಕೊಳ್ಳಲು ಗುಡಿಸಲು ನಿರ್ಮಿಸಿಕೊಂಡಿರುವ ಈ ಕುಟುಂಬಗಳು ನಾಗರಿಕ ಜಗತ್ತಿನ ನಡುವೆ ಅಕ್ಷರಶಃ ಆದಿವಾಸಿಗಳಂತೆ ಬದುಕುವಂತಾಗಿದೆ. ಸೌಲಭ್ಯಗಳನ್ನು ನೀಡಬೇಕಾದ ಸರ್ಕಾರ ಈ ಅಲೆಮಾರಿ ಕುಟುಂಬಗಳ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಗುಂಡುತೋಪಿನಲ್ಲಿ ಕುಡಿಯುವ ನೀರಿಲ್ಲ ಸೌಲಭ್ಯ ಕಲ್ಪಿಸಿಲ್ಲ. ವಿದ್ಯುತ್ ಬೆಳಕು ಕತ್ತಲಾಗಿದೆ. ರಸ್ತೆ, ಶಾಲೆ ಯಾವುದೇ ಅನುಕೂಲಗಳು ಇರುವುದಿಲ್ಲ. ಬಿಸಿಲು, ಮಳೆ, ಗಾಳಿಗೆ ಮೈವೊಡ್ಡಿಕೊಂಡೇ ಬದುಕು ಬಂಡಿ ಹೋಗುತ್ತಿದೆ. ಸುಡುಗಾಡು ಸಿದ್ದರ ಕುಟುಂಬದ ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ. ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಸಾಹಿತಿ ವಡ್ಡಗೆರೆ ನಾಗರಾಜಯ್ಯ ಆಗ್ರಹಿಸಿದ್ದಾರೆ.
ಚಿಕ್ಕನಾಯಕನಹಳ್ಳಿಯಿಂದ ಶಾಸಕರಾಗಿ ಆಯ್ಕೆಯಾಗಿ ಸಣ್ಣ ನೀರಾವರಿ ಸಚಿವರಾಗಿರುವ ಜೆ.ಸಿ.ಮಾಧುಸ್ವಾಮಿ ತಮ್ಮ ಕ್ಷೇತ್ರದಲ್ಲಿ ಇಂತಹ ಸಂಕಟಮಯ ಬದುಕಿನಲ್ಲಿ ಜೀವನ ಸಾಗಿಸುತ್ತಿರುವ ಸುಡುಗಾಡು ಸಿದ್ದರ ಕುಟುಂಬಗಳಿಗೆ ಚೈತನ್ಯ ತುಂಬಬೇಕಿದೆ. ಅಲೆಮಾರಿಗಳ ಬದುಕು ಹಸನುಗೊಳಿಸಲು ಮುಂದಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.

























Discussion about this post