ಚಂಡೀಗಡ: ಹರಿಯಾಣ ಮನೋಹರ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಮತ್ತು ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಸಮ್ಮಿಶ್ರ ಸರ್ಕಾರ, ಅಬಕಾರಿ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು, ಮದ್ಯಸೇವನೆ, ಖರೀದಿ ಮತ್ತು ಮಾರಾಟದ ಕನಿಷ್ಠ ವಯಸ್ಸನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಕೆ ಮಾಡಿದೆ. ಈ ಕುರಿತು ತಿದ್ದುಪಡಿ ಮಸೂದೆಗೆ ಹರಿಯಾಣ ವಿಧಾನಸಭೆ ಬುಧವಾರ ಅನುಮೋದನೆ ನೀಡಿದೆ.
ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯಲ್ಲೂ ಆಮೂಲಾಗ್ರ ಬದಲಾವಣೆ ಮಾಡಿದ ಮಸೂದೆಯನ್ನು ಅಬಕಾರಿ ಮತ್ತು ತೆರಿಗೆ ಖಾತೆಯನ್ನೂ ಹೊಂದಿರುವ ಹಾಗೂ ಜೆಜೆಪಿಯ ಮುಖ್ಯಸ್ಥರೂ ಆದ ಉಪಮುಖ್ಯಮಂತ್ರಿ ದುಷ್ಯಂತ ಚೌತಾಲಾ ಮಂಡಿಸಿದರು.
ಜನರು ಈಗ ಹೆಚ್ಚು ಜಾಗೃತರಾಗಿದ್ದಾರೆ. ಯುಕ್ತಾಯುಕ್ತತೆಯನ್ನು ವಿವೇಚಿಸುವ ಶಕ್ತಿ ಯುವಜನರಲ್ಲಿ ಇದೆ ಎಂದು ಮದ್ಯಸೇವನೆಯ ಕನಿಷ್ಠ ವಯಸ್ಸು ಇಳಿಸುವ ಕ್ರಮವನ್ನು ಅವರು ಸಮರ್ಥಿಸಿಕೊಂಡರು.
ಅನೇಕ ರಾಜ್ಯಗಳಲ್ಲಿ ಮದ್ಯಸೇವನೆಯ ಕನಿಷ್ಠ ವಯಸ್ಸು 21ವರ್ಷಕ್ಕೆ ಇದೆ ಎಂದು ಸರ್ಕಾರ ಹೇಳಿದೆ.
ಆದರೆ, ಈ ಮಸೂದೆಯನ್ನು ವಿರೋಧ ಪಕ್ಷಗಳಾದ ಐಎನ್ಎಲ್ಡಿ ಮತ್ತು ಕಾಂಗ್ರೆಸ್ಗಳು ವಿರೋಧಿಸಿವೆ. ಸರ್ಕಾರದ ಈ ನಿರ್ಧಾರದಿಂದ ಯುವ ಜನರು ಬೇಗ ಮದ್ಯದ ಚಟಕ್ಕೆ ತುತ್ತಾಗಲಿದ್ದಾರೆ. ತನ್ನ ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ಯುವಜನತೆಯನ್ನು ಬಲಿಪಶು ಮಾಡುತ್ತಿದೆ ಎಂದು ಟೀಕಿಸಿವೆ.
ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲೂ (ಎನ್ಸಿಆರ್) ಇತ್ತೀಚೆಗೆ ಮದ್ಯಸೇವನೆ ಕನಿಷ್ಠ ವಯಸ್ಸನ್ನು 21ಕ್ಕೆ ಇಳಿಕೆ ಮಾಡಲಾಗಿದೆ.
Haryana Lowers Drinking Age From 25 To 21
ಇದನ್ನು ಓದಿ: ಮಥುರಾದಲ್ಲಿ ಮದ್ಯ-ಮಾಂಸಕ್ಕೆ ನಿಷೇಧ
ಇದನ್ನೂ ಓದಿ: ಉತ್ತರ, ವಾಯವ್ಯ ಭಾರತದಲ್ಲಿ ತೀವ್ರವಾಗಲಿದೆ ಚಳಿ
Discussion about this post