ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಮೃತರಾದವರ ವಾರಸುದಾರರಿಗೆ 1 ಲಕ್ಷ ರೂ.ಗಳನ್ನು ಪರಿಹಾರ ಧನ ನೀಡುವುದಾಗಿ ರಾಜ್ಯದ ಬಿಜೆಪಿ ಸರ್ಕಾರ ಈ ಹಿಂದೆ ಘೋಷಿಸಿತ್ತು. ಆದರೆ ಇದೀಗ ಈ ಆದೇಶವನ್ನು ವಾಪಾಸು ಪಡೆದು ಪರಿಷ್ಕೃತ ಆದೇಶವನ್ನು ಹೊರಡಿಸಿದೆ.
ರಾಜ್ಯ ಸರ್ಕಾರವು ಜುಲೈ ತಿಂಗಳಲ್ಲಿ, ಕೊರೊನಾದಿಂದಾಗಿ ದುಡಿಯುವ ಸದಸ್ಯರನ್ನು ಕಳೆದುಕೊ೦ಡ೦ತಹ, ಬಡತನ ರೇಖೆಗಿ೦ತ ಕೆಳಗಿರುವ ಕುಟುಂಬಕ್ಕೆ 1 ಲಕ್ಷ ರೂ.ಗಳನ್ನು ಪರಿಹಾರ ನೀಡುವುದಾಗಿ ಘೋಷಿಸಿತ್ತು. ಹಾಗೂ ಸದರಿ ಹಣವನ್ನು ಅರ್ಹ ಸ೦ತ್ರಸ್ತ ಕುಟುಂಬದ ಕಾನೂನುಬದ್ದ ವಾರಸುದಾರರಿಗೆ ನೀಡುವುದಾಗಿ ಹೇಳಿತ್ತು
ಸದರಿ ಪರಿಹಾರ ಧನವನ್ನು, ಜಿಲ್ಲಾಧಿಕಾರಿಗಳ ಜಿಲ್ಲಾ ವಿಪತ್ತು ಪರಿಹಾನ ನಿಧಿಯಿಂದ(DDRF) ಪಿ.ಡಿ. ಖಾತೆಯಲ್ಲಿ ಪ್ರಸ್ತುತ ಲಭ್ಯವಿರುವ ಅನುದಾನದಿಂದ ವಿತರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೆಪ್ಟೆಂಬರ್ 23 ರ ಗುರವಾರದಂದು ಆದೇಶ ನೀಡಲಾಗಿತ್ತು.
ಆದರೆ, ಒಕ್ಕೂಟ ಸರ್ಕಾರವು ಕೊರೊನಾದಿ೦ದಾಗಿ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ 50 ಸಾವಿರ ರೂ.ಗಳು ನೀಡಬೇಕು ಎಂದು ಸೂಚನೆ ನೀಡಿದ್ದರಿಂದ, ರಾಜ್ಯ ಸರ್ಕಾರ ನೀಡುವುದಾಗಿ ಘೋಷಿಸಿದ್ದ 1 ಲಕ್ಷ ರೂ. ಪರಿಹಾರದ ಆದೇಶವನ್ನು ವಾಪಾಸು ಪಡೆದಿದೆ.
ಸೆಪ್ಟೆಂಬರ್ 25 ರಂದು ಒಕ್ಕೂಟ ಸರ್ಕಾರದ ಗೃಹ ಸಚಿವಾಲಯ ನೀಡಿರುವ ನಿರ್ದೇಶನದ೦ತೆ, ಕೊರೊನಾದಿಂದಾಗಿ ಮೃತಪಟ್ಟ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರಿಗೆ 50 ಸಾವಿರ ರೂ. ಪರಿಹಾರ ನೀಡಬೇಕಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿ೦ದ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದ್ದು, ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿ ಸೆಪ್ಟೆಂಬರ್ 23 ರಂದು ಹೊರಡಿಸಲಾಗಿದ್ದ ಆದೇಶವನ್ನು ಯಥಾವತ್ತಾಗಿ ಹಿಂಪಡೆಯಲಾಗಿದೆ ಎಂದು ಮಂಗಳವಾರದ ಆದೇಶದಲ್ಲಿ ತಿಳಿಸಲಾಗಿದೆ.

























Discussion about this post